ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವಿದೇಶಿ ನೇರ ಬಂಡವಾಳ ಎಷ್ಟು ಮುಖ್ಯ ಎಂದು ಮನಗಂಡು ನಮ್ಮ ಮನವಿ ಆಲಿಸಿ ಇದೇ ತಿಂಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ವಿಶ್ವ ಹೂಡಿಕೆ ಸಮ್ಮೇಳನ- ೨೦೨೫ಕ್ಕೆ ಆಹ್ವಾನ ಪತ್ರಿಕೆ ಬಂದಿದ್ದು, ಇದರಲ್ಲಿ ಪಾಲ್ಗೊಳ್ಳುವುದಾಗಿ ಹಾಸನ ಮೆಗಾ ಫುಡ್ ಪಾರ್ಕ್ ಸಿಇಒ ಅಶೋಕ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ,ಸಚಿವರು ಮತ್ತು ಆಯುಕ್ತರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಗೆ ಮತ್ತು ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಮರಣೆ ಹಾಗು ರಫ್ತು ನಿಗಮ ನಿಯಮಿತಕ್ಕೆ ಅಭಿನಂದನೆ ತಿಳಿಸಿದರು. ಈ ಎರಡು ಸಂಸ್ಥೆಗಳು ಕೃಷಿ ಮತ್ತು ಆಹಾರ ಸಂಸ್ಕರಣೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಎಷ್ಟು ಮುಖ್ಯ ಎಂದು ಮನಗಂಡು ನಮ್ಮ ಮನವಿ ಆಲಿಸಿ ಇದೇ ತಿಂಗಳು ಅರಮನೆ ಮೈದಾನದಲ್ಲಿ ನಡೆಯಲಿರುವ "ವಿಶ್ವ ಹೂಡಿಕೆ ಸಮ್ಮೇಳನ ೨೦೨೫ " ಆಹ್ವಾನ ಪತ್ರಿಕೆ ಜನವರಿ ೨೦ನೇ ತಾರೀಖು ಕಳುಹಿಸಿರುತ್ತಾರೆ. ಫುಡ್ ಪಾರ್ಕಿನ ೨೦೨೫-೨೬ನೇ ಸಾಲಿನ ಗುರಿಗಳು ಎಂದರೇ ಸುಸ್ಥಿರ ವೃತ್ತಾಕಾರದ ಆರ್ಥಿಕತೆ ಪರಿಚಯಿಸುವುದು, ವಿದೇಶಿ ಖರೀದಿದಾರರು ಕಳೆದ ವರ್ಷ ೨೦೨೪ ಡಿಸೆಂಬರ್ ೩೧ ಗುಜರಾತ್ ಜೊತೆ ಮಾಡಿಕೊಂಡಿದ್ದ ಒಪ್ಪಂದಗಳು ಕೊನೆಯಾಗಿದ್ದು, ನಮ್ಮ ಫುಡ್ ಪಾರ್ಕ್ ಜೊತೆ ನೇರ ಖರೀದಿ ಒಪ್ಪಂದ ಮಾಡಿಕೊಂಡಿರುವ ಕಾರಣ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆ ಮಾಡಿ ತಿಂಗಳಿಗೆ ಕನಿಷ್ಠ ೫ ಕೋಟಿ ಮೊತ್ತದ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಸಿದ್ಧಪಡಿಸಿದ ಆಹಾರ ಸಂಸ್ಕರಣಾ ವಸ್ತುಗಳನ್ನು ರಫ್ತು ಮಾಡುವುದು ಆಗಿದೆ ಎಂದರು.
ಒಪ್ಪಂದ ಕೃಷಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ರೈತ ಸಮೂಹವನ್ನು ಸಾಲದಿಂದ ಮುಕ್ತಿಗೊಳಿಸುವುದು. ಇದಕ್ಕೆ ರೈತ ಸಮೂಹ ಬೆಂಬಲಿಸುವ ವಿಶ್ವಾಸ ನಮ್ಮ ಪುಡ್ ಪಾರ್ಕಿಗೆ ಇದೆ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಪ್ರವಾಸೋದ್ಯಮ ಮತ್ತು ಕೃಷಿ ಪ್ರವಾಸೋದ್ಯಮಕ್ಕೆ ಇರುವ ಅವಕಾಶವನ್ನು ಈಗಾಗಾಲೇ ನಾವು ಅರಿತುಕೊಂಡಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು ೨೫,೦೦೦ಕ್ಕೂ ಹೆಚ್ಚಿನ ವಿದೇಶಿ ಪ್ರವಾಸಿಗರು ಕರೆದುಕೊಂಡು ಬರುವುದಾಗಿದೆ ಎಂದು ಹೇಳಿದರು.ಕೃಷಿಯಲ್ಲಿ ಕಾರ್ಮಿಕರು ಸಿಗುವುದು ಒಂದು ಪ್ರಮುಖ ಸಮಸ್ಯೆ ಆಗಿರುವುದರಿಂದ ಕೃಷಿ ಯಾಂತ್ರೀಕರಣದಲ್ಲಿ ಡ್ರೋನ್ ಸೇರಿದಂತೆ ಇತರ ಅತ್ಯುನ್ನತ ಯಂತ್ರಗಳ ಪರಿಣಾಮಕಾರಿಯಾಗಿ ಬಳಕೆ ಮಾಡಿ ಕೃಷಿ ವೆಚ್ಚ ತಗ್ಗಿಸುವುದು, ಮಾನವನ ಆರೋಗ್ಯದ ಮೇಲೆ ಅಡಿಕೆ ಉತ್ಪನ್ನಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಡಿಕೆ ಮತ್ತು ಅದರ ಉತ್ಪನ್ನಗಳ ಪರ್ಯಾಯ ಬಳಕೆಗಳನ್ನು ಅನ್ವೇಷಿಸಲು ಜನವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಸುಮಾರು ೯ ಕೋಟಿ ಮಂಜೂರು ಮಾಡಿರುತ್ತದೆ. ಆದರೆ ನಾವು ಅಡಿಕೆ ಬೆಳೆಗಾರರ ಸಮಸ್ಯೆ ಮನಗಂಡು ಸುಮಾರು ೨ ವರ್ಷಗಳ ಹಿಂದೆಯೇ ಅಮೆರಿಕ ಮೂಲದ ಸಂಸ್ಥೆಯೊಂದಿಗೆ ಅಧ್ಯಯನ ನಡೆಸಿ ಅದರ ವರದಿ ಸಿದ್ಧಗೊಂಡಿದ್ದು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪ್ರಕಟಿಸುತ್ತೇವೆ. ಈ ವರದಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕದ ಅಡಿಕೆ ಬೆಲೆಯಲ್ಲಿ ಸ್ಥಿರತೆ ಮೂಡಿಸುವ ಭರವಸೆ ನಮಗೆ ಇದೆ ಎಂದರು.
ಜಿಲ್ಲೆಯಲ್ಲಿ ಶುಂಠಿ ಬೆಳೆಯುವುದು ಜಾಸ್ತಿ ಆಗಿದೆ. ಕಳೆನಾಶಕ ಬದಲಿಗೆ ಪ್ಲಾಂಟ್ ಮ್ಯಾಟ್ರಿಕ್ಸ್ ತಂತ್ರಜ್ಞಾನ ಪರಿಚಯಿಸಲಾಗುವುದು. ಕಾಫಿ ಬೆಳೆಗೆ ಸಂಬಂಧಪಟ್ಟಂತೆ ಈಗಾಗಲೇ ೨.೫ ಟನ್ ಕಾಫಿ ಆಧಾರಿತ ಉತ್ಪನ್ನಗಳನ್ನು ರಫ್ತು, ಮಾಡಲು ಪ್ರೀತಂ ಫರ್ನಾಂಡಿಸ್, ಮೂಡಿಗೆರೆ ಅವರಿಗೆ ಬಂದಿರುವ ಕಾರಣ ಕಾಫಿ ಬೆಳೆಗಾರರು ಅವರನ್ನು ಸಂಪರ್ಕಿಸಬಹುದು. ವೈನ್ ಆಧಾರಿತ ಯಾವುದೇ ಉತ್ಪನ್ನಗಳ ರಫುಗೆ ಪ್ರಕಾಶ್ ಕೆರೂಡಿ ಹಾವೇರಿ ಅವರನ್ನು ಸಂಪರ್ಕಿಸಬಹುದು. ರಾಗಿ ಮತ್ತು ರಾಜಮುಡಿ ಭತ್ತ ಆಧಾರಿತ ಉತ್ಪನ್ನಗಳ ರಫ್ತಿಗೆ ನಾಗರಾಜು ಅರಕಲಗೂಡು ಇವರನ್ನು ಸಂಪರ್ಕಿಸಬಹುದು. ಇತರ ಯಾವುದೇ ಬೆಳೆಗಳಿಗೆ ನನ್ನನ್ನು ಸಂಪರ್ಕಿಸಬಹುದು. ಹಾಸನ ಜಿಲ್ಲೆಯ ಟೆಕ್ಸ್ಟೈಲ್ ಪಾರ್ಕ್‌ನಲ್ಲಿ ಲಭ್ಯ ಇರುವ ಜಾಗ ಪಡೆದು ಕೃಷಿ ಆಧಾರಿತ ಬಟ್ಟೆ ತಯಾರಿಕೆ ಕಾರ್ಖಾನೆ ಶುರು ಮಾಡಲು ಕ್ರಮ ವಹಿಸಲಾಗುವುದು. ಇದರಿಂದ ೩೦೦ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ ಮತ್ತು ೨೦೨೫-೨೬ರ ನಮ್ಮ ಫುಡ್ ಪಾರ್ಕಿನ ಮುಂದಿನ ಗುರಿ "ಪ್ಲಾಸ್ಟಿಕ್ ಮುಕ್ತ ಹಾಸನ "ವಾಗಿದೆ ಎಂದು ಹೇಳಿದರು.ಭಾರತದಲ್ಲಿ ಒಟ್ಟು ೭೮೮ ಜಿಲ್ಲೆಗಳಿವೆ ಎಲ್ಲ ಜಿಲ್ಲೆಗಳಲ್ಲಿಯೂ ಪ್ಲಾಸ್ಟಿಕ್ ಎನ್ನುವುದು ಒಂದು ಶಾಪವಾಗಿ ಪರಿಣಮಿಸಿದೆ, ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆದರೆ ನಾವು ಈಗಾಗಲೇ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮೆಕ್ಕ ಜೋಳದ ಪಿಷ್ಟ ಸ್ಮಾರ್ಚ್‌ನಿಂದ ಮಾಡಿದ ಉತ್ಪನ್ನವನ್ನು ತೋರಿಸಿದ್ದೆವು. ಮುಂದುವರಿದು ಸಿಂಗಾಪುರ ಮೂಲದ ಸಂಸ್ಥೆಯೊಂದು ಪ್ಲಾಸ್ಟಿಕ್‌ಗೆ ಪರ್ಯಾಯ ಉತ್ಪನ್ನಗಳ ತಂತ್ರಜ್ಞಾನವೊಂದನ್ನು ಹಂಚಿಕೊಳ್ಳಲು ಮುಂದೆ ಬಂದಿರುವ ಕಾರಣ ಮುಂದಿನ ತಿಂಗಳು ಸಿಂಗಾಪುರ ಪ್ರವಾಸ ಕೈಗೊಳ್ಳಲಾಗುವುದು. ಈಗ ಹಾಸನ ಜಿಲ್ಲೆಯಲ್ಲಿ ಶೇಖರಣೆ ಆಗಿರುವ ಪ್ಲಾಸ್ಟಿಕ್ ಅನ್ನು ಕರಗಿಸುವುದು ನನ್ನ ಮುಂದಿನ ಗುರಿ ಆಗಿದ್ದು, ಇದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರು ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.