ತುಳು ಸಂಸ್ಕೃತಿ, ಆಚಾರವಿಚಾರಗಳನ್ನು ಪಸರಿಸುವುದರ ಜತೆಗೆ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯವನ್ನು ತುಳುಕೂಟ ಉಡುಪಿ ನಿರಂತರವಾಗಿ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಉಡುಪಿ; ತುಳು ಸಂಸ್ಕೃತಿ, ಆಚಾರವಿಚಾರಗಳನ್ನು ಪಸರಿಸುವುದರ ಜತೆಗೆ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯವನ್ನು ತುಳುಕೂಟ ಉಡುಪಿ ನಿರಂತರವಾಗಿ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಅವರು ತುಳುಕೂಟ ಉಡುಪಿ ವತಿಯಿಂದ ಆಯೋಜಿಸಲಾಗುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ತುಳು ನಾಟಕ ಸ್ಪರ್ಧೆಯ ಬೆಳ್ಳಿಹಬ್ಬದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಪೀಳಿಗೆಗೆ ತುಳು ನಾಡಿನ ಪರಂಪರೆಯನ್ನು ಪರಿಚಯಿಸುವುದಕ್ಕಾಗಿ ಪ್ರತಿವರ್ಷವೂ ತುಳುಕೂಟ ಹತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನಾಟಕ ಪರ್ಬದ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಬೆಳ್ಳಿಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲುದ್ದೇಶಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಉಡುಪಿ ವಿಶ್ವನಾಥ ಶೆಣೈ, ಸುಭಾಸ್ ಸಾಲ್ಯಾನ್ ನೆಲ್ಲಿಕಟ್ಟೆ, ಹರಿಪ್ರಸಾದ್ ರೈ, ತುಳುಕೂಟದ ಉಪಾಧ್ಯಕ್ಷರಾದ ಭುವನಪ್ರಸಾದ್ ಹೆಗ್ಡೆ, ವಿ.ಕೆ. ಯಾದವ್, ಶೋಭಾ ಶೆಟ್ಟಿ ಹಾಗೂ ಕೆಮ್ತೂರು ಕುಟುಂಬದ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ನಾಟಕ ಪರ್ಬದ ಸಂಚಾಲಕ ಪ್ರಭಾಕರ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುಕೂಟದ ಮಾಧ್ಯಮ ಸಂಚಾಲಕಿ ಯಶೋಧ ಕೇಶವ್ ಕಾರ್ಯಕ್ರಮ ನಿರೂಪಿಸಿದರು.