ಯುವ ಜನರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆಗಳು ಸಜ್ಜು: ಗಾಣಕಲ್ ನಟರಾಜ್

| Published : Nov 23 2025, 01:15 AM IST

ಯುವ ಜನರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆಗಳು ಸಜ್ಜು: ಗಾಣಕಲ್ ನಟರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಟೆನ್ನಿಸ್ ಬಾಲ್ ಕ್ರಿಕೆಟ್ , ಷಟಲ್ ಬ್ಯಾಡ್ಮಿಂಟನ್ , ಕಬಡ್ಡಿ ಪಂದ್ಯಾವಳಿ, ರಂಗಗೀತೆ, ವಾಲಿಬಾಲ್, ಥ್ರೋಬಾಲ್, ಮ್ಯಾರಥಾನ್ ಓಟ, ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, ಪ್ರತಿಭಾ ಪುರಸ್ಕಾರ, ದಂಪತಿಗಳ ಫ್ಯಾಷನ್ ಶೋ, ವೇಷಭೂಷಣ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆಗಳು ಹೋಬಳಿ, ಜಿಲ್ಲಾ ಮಟ್ಟ ಹಾಗೂ ವಿಧಾನಸಭಾ ಹಂತದಲ್ಲಿ ನಡೆಯಲಿವೆ. ವಿಜೇತರಿಗೆ ಸೂಕ್ತ ಬಹುಮಾನವಿದೆ .

ಕನ್ನಡಪ್ರಭ ವಾರ್ತೆ ರಾಮನಗರ

ಕನಕೋತ್ಸವ- 2025ರ ಅಂಗವಾಗಿ ಆಯೋಜನೆಗೊಂಡಿರುವ ಮಾಗಡಿ ಕೆಂಪೇಗೌಡ ಉತ್ಸವದ ಪ್ರಯುಕ್ತ ಡಿಸೆಂಬರ್ 28 ರವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಯುವ ಜನರಲ್ಲಿನ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಗಳು ಸಜ್ಜಾಗಿವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್‌ ನಟರಾಜು ಹೇಳಿದರು.

ಬಿಡದಿಯ ಜೆವಿಐಟಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಾಗಡಿ ಕೆಂಪೇಗೌಡ ಉತ್ಸವದಿಂದ ಕನಕೋತ್ಸವ- 2025ರವರೆಗೆ ಶೀರ್ಷಿಕೆಯಡಿ ಕೂಟಗಲ್ ಹೋಬಳಿ ಮತ್ತು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವರ್ಷ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಕನಕಪುರದಲ್ಲಿ ಕನಕೋತ್ಸವ ಕಾರ್ಯಕ್ರಮ ನಡೆಯುತ್ತದೆ. ಈಗ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿದ್ದು, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಗಡಿ ಕೆಂಪೇಗೌಡ ಉತ್ಸವ, ರಾಮನಗರದಲ್ಲಿ ರಾಮೋತ್ಸವ ಮತ್ತು ಚನ್ನಪಟ್ಟಣದಲ್ಲಿ ಬೊಂಬೆನಾಡು ಉತ್ಸವ ಆಯೋಜಿಸಿ, ಗ್ರಾಮೀಣ ಯುವಕರಿಗೆ ವೇದಿಕೆ ಕಲ್ಪಿಸಿ ಅವರಲ್ಲಿನ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅದರ ಭಾಗವಾಗಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಹೋಬಳಿ ಮತ್ತು ವಿಧಾನಸಭಾ ಮಟ್ಟದ ವಿವಿಧ ಕ್ರೀಡಾ ಪಂದ್ಯಾವಳಿಗಳಿಗೆ ಶನಿವಾರ ಚಾಲನೆ ಸಿಕ್ಕಿದೆ ಎಂದು ತಿಳಿಸಿದರು.

ನವೆಂಬರ್ ತಿಂಗಳಲ್ಲಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಬಿಡದಿ ಹೋಬಳಿಯೊಂದರಲ್ಲಿ 70 ಕ್ರಿಕೆಟ್ ತಂಡಗಳು, 44 ವಾಲಿಬಾಲ್ ತಂಡಗಳು, 16 ಕಬಡ್ಡಿ ತಂಡಗಳು, 42 ಷಟಲ್ ಬ್ಯಾಡ್ಮಿಂಟನ್ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದನ್ನು ನೋಡಿದರೆ ಕೆಂಪೇಗೌಡ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಟೆನ್ನಿಸ್ ಬಾಲ್ ಕ್ರಿಕೆಟ್ , ಷಟಲ್ ಬ್ಯಾಡ್ಮಿಂಟನ್ , ಕಬಡ್ಡಿ ಪಂದ್ಯಾವಳಿ, ರಂಗಗೀತೆ, ವಾಲಿಬಾಲ್, ಥ್ರೋಬಾಲ್, ಮ್ಯಾರಥಾನ್ ಓಟ, ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, ಪ್ರತಿಭಾ ಪುರಸ್ಕಾರ, ದಂಪತಿಗಳ ಫ್ಯಾಷನ್ ಶೋ, ವೇಷಭೂಷಣ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆಗಳು ಹೋಬಳಿ, ಜಿಲ್ಲಾ ಮಟ್ಟ ಹಾಗೂ ವಿಧಾನಸಭಾ ಹಂತದಲ್ಲಿ ನಡೆಯಲಿವೆ. ವಿಜೇತರಿಗೆ ಸೂಕ್ತ ಬಹುಮಾನವಿದೆ ಎಂದು ಗಾಣಕಲ್ ನಟರಾಜು ತಿಳಿಸಿದರು.

ಈ ವೇಳೆ ಕ್ರೀಡಾಪಟುಗಳಿಗೆ ಕನಕೋತ್ಸವ- 2025ರ ಟೀ ಶರ್ಟ್ ಗಳನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಗ್ರಾಪಂ ಅಧ್ಯಕ್ಷ ಹೊಂಬೇಗೌಡ (ಪುಟ್ಟ), ಇಟ್ಟಮಡು ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿ, ಮುಖಂಡರುಗಳಾದ ಹೆಜ್ಜಾಲ ರಂಗಸ್ವಾಮಿ, ಹೊಸೂರು ರಾಜಣ್ಣ, ಗೋಪಾಲ ರಾಜು, ಜೀವನ್‌ಬಾಬು, ಹೇಮಂತ್‌ಕುಮಾರ್, ಕೇಶವ ಮತ್ತಿತರರು ಹಾಜರಿದ್ದರು.

--------------------------------

22ಕೆಆರ್ ಎಂಎನ್ 3.ಜೆಪಿಜಿ

ಬಿಡದಿಯ ಜೆವಿಐಟಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೂಟಗಲ್ ಹೋಬಳಿ ಮತ್ತು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಗಾಣಕಲ್‌ ನಟರಾಜು ಟೀ ಶರ್ಟ್ ವಿತರಿಸಿದರು.

---------

ಯುವಕರ ಪ್ರತಿಭೆ ಅನಾವರಣಕ್ಕೆ ಕನಕೋತ್ಸವ ಸಹಕಾರಿ: ಎ.ಬಿ.ಗಂಗಾಧರಗೌಡ

ರಾಮನಗರ: ಯುವಕರು ಮತ್ತು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಕೆಲಸವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣರವರು ಮಾಡುತ್ತಿದ್ದಾರೆ ಎಂದು ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಗಂಗಾಧರಗೌಡ ಹೇಳಿದರು.

ಜಾಲಮಂಗಲ ಸರ್ಕಾರಿ ಶಾಲೆಯ ಕ್ರೀಡಾಂಗಣದಲ್ಲಿ ಮಾಗಡಿ ಕೆಂಪೇಗೌಡ ಉತ್ಸವ ಅಂಗವಾಗಿ ಕೂಟಗಲ್ ಹೋಬಳಿ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಅವರು, ಕನಕೋತ್ಸವ - 2025ರ ಪ್ರಯುಕ್ತ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಹೋಬಳಿ ಮತ್ತು ವಿಧಾನಸಭಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತವಾದ ತಂಡಗಳು ಕನಕಪುರದಲ್ಲಿ ಜರುಗಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ ಎಂದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ 25 ತಂಡಗಳು ಭಾಗವಹಿಸಿದ್ದು, ಇಲ್ಲಿಂದ ಒಂದು ತಂಡವನ್ನು ವಿಧಾನಸಭಾ ಕ್ಷೇತ್ರಕ್ಕೆ ಕಳುಹಿಸುತ್ತೇವೆ. ಈ ರೀತಿ ಪ್ರತಿ ಹೋಬಳಿಯಿಂದ ವಿಧಾನಸಭಾ ಕ್ಷೇತ್ರಕ್ಕೆ ಬಂದ ತಂಡಗಳಲ್ಲಿ ಅತ್ಯುತ್ತಮವಾದ ಒಂದು ತಂಡ ಮಾಗಡಿ ಕ್ಷೇತ್ರದಿಂದ ಕನಕೋತ್ಸವ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದರು.

ನ.29 ಮತ್ತು 30ರಂದು ವಾಲಿಬಾಲ್ , ಕಬಡ್ಡಿ, ಷಟಲ್ ಬ್ಯಾಡ್ಮಿಂಟನ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ. ವಿಜೇತರಿಗೆ ಮೊದಲ, ದ್ವಿತೀಯ , ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇಕಡ 60ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಗಂಗಾಧರಗೌಡ ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಎಸ್.ಪಿ.ಜಗದೀಶ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಪುಟ್ಟಮಾರೇಗೌಡ, ಗ್ರಾಪಂ‌ ಮಾಜಿ ಅಧ್ಯಕ್ಷ ಚಂದ್ರು, ಸದಸ್ಯರಾದ ತಡಿಕವಾಗಿಲು ನಾಗರಾಜು, ಶ್ರೀಕಾಂತ್, ಗೊಲ್ಲರದೊಡ್ಡಿ ಮಹದೇವಯ್ಯ, ಮುಖಂಡರಾದ ಕ್ಯಾಸಾಪುರ ಮಂಜು, ಶ್ಯಾನುಬೋಗನಹಳ್ಳಿ ರಾಜು, ಅಂಕೇಗೌಡ ಕಣ್ವ, ಕನಕಪುರ ತಾಲೂಕು ಯುವ ಕಾಂಗ್ರಸ್ ಉಪಾಧ್ಯಕ್ಷ ಚೇತನ್ , ಯುವ ಮುಖಂಡರಾದ ಗುರುಪ್ರಸಾದ್ , ತೇಜ ತಿಮ್ಮಸಂದ್ರ ಮತ್ತಿತರರು ಹಾಜರಿದ್ದರು‌.