ಜನಪದ ಸಾಹಿತ್ಯಕ್ಕೆ ಜೆ.ಎಫ್. ಪ್ಲೀಟ್ ಕೊಡುಗೆ ಅನನ್ಯವಾಗಿದೆ ಎಂದು ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಈಶ್ವರಯ್ಯ ಕೊಡಂಬಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಜನಪದ ಸಾಹಿತ್ಯಕ್ಕೆ ಜೆ.ಎಫ್. ಪ್ಲೀಟ್ ಕೊಡುಗೆ ಅನನ್ಯವಾಗಿದೆ ಎಂದು ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಈಶ್ವರಯ್ಯ ಕೊಡಂಬಲ್ ಹೇಳಿದರು.

ರೆವರೆಂಡ್ ಡಾ. ಜೆ.ಟಿ.ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದಿಂದ ನಗರದ ಮಂಗಲಪೇಟೆಯ ರೆ.ಎಂ.ಡಿ.ರಾಸ್ ಮೆಮೋರಿಯಲ್ ಚರ್ಚ್‌ನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಜೆ.ಎಫ್.ಪ್ಲೀಟ್ ಕುರಿತ ವಿಶೇಷ ಚಿಂತನೆ ಕಾರ್ಯ ಕ್ರಮದಲ್ಲಿ ಮಾತನಾಡಿ, ಉತ್ತಮ ಆಡಳಿತಾಧಿಕಾರಿಯಾಗಿದ್ದ ಪ್ಲೀಟ್ ಶಿಕ್ಷಣ, ಕಲಾ ಪ್ರೇಮಿ, ಚಿಂತಕರೂ ಆಗಿದ್ದರು. ವೃತ್ತಿಯ ಜತೆಗೆ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಸಹ ಶ್ರಮಿಸಿದ್ದರು. ಶಾಸನ ಹಾಗೂ ಲಾವಣಿಗಳನ್ನು ಸಂಗ್ರಹಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಲಾವಣಿ ಕಲಾವಿದರನ್ನು ರಾತ್ರಿ ಕರೆಸಿ, ಅವರಿಂದ ಲಾವಣಿ ಹಾಡಿಸಿ ದಾಖಲು ಮಾಡಿಕೊಳ್ಳುತ್ತಿದ್ದರು. ಕಿತ್ತೂರು ರಾಣಿ ಚನ್ನಮ್ಮಳ ಸೊಸೆ ಈರಮ್ಮ, ಹಲಗಲಿ ಬೇಡರ ಭೂ ಕಂದಾಯ ಕುರಿತ ಲಾವಣಿ, ಬ್ರಿಟಿಷರ ವಿರುದ್ಧ ಬರೆದ, ಬಡವರು, ರೈತರ ನೋವಿನ, ಬಾದಾಮಿ ಕೋಟೆಯ ಶಾಸನ ಮೊದಲಾದ ಲಾವಣಿಗಳನ್ನು ಸಂಗ್ರಹಿಸಿದರು ಎಂದು ಹೇಳಿದರು. ಇಂಡಿಯನ್ ಕಾಂಟಿನೆಟ್ ಪತ್ರಿಕೆಯಲ್ಲಿ ಲಾವಣಿಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಕೂಡ ಮಾಡಿದರು ಎಂದು ಹೇಳಿದರು.

ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಉದ್ಘಾಟಿಸಿ ಮಾತನಾಡಿ, ಶ್ರೇಷ್ಠವಾದ ಜನಪದ ಕನ್ನಡ ಸಾಹಿತ್ಯ ಓದುಗರ ಕೈ ಸೇರುವಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸಾಹಿತ್ಯ ಆಸಕ್ತರು, ರಚನೆಕಾರರು ಆಗಿದ್ದ ಮಿಷನರಿಗಳು ಸೃಜನಾತ್ಮಕ ಸಾಹಿತ್ಯ ಬೆಳಕಿಗೆ ತಂದರು. ತಮ್ಮನ್ನು ಚಿಕ್ಕವರೆಂದು ಭಾವಿಸಿ, ಸೇವೆ ಮಾಡಿ ದೊಡ್ಡವರಾದರು ಎಂದು ಹೇಳಿದರು. ಮಿಷನರಿಗಳು ಕನ್ನಡಕ್ಕೆ ನೀಡಿದ ಸೇವೆ ಅವಿಸ್ಮರಣೀಯ. ಅದರಲ್ಲಿ ಜೆ.ಎಫ್.ಪ್ಲೀಟ್ ವಿಶೇಷವಾದವರು ಎಂದು ಸಾನ್ನಿಧ್ಯ ವಹಿಸಿದ್ದ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಡಿಸೋಜ ಥಾಮಸ್ ತಿಳಿಸಿದರು. ಬೀದರ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಹಿರಿಯ ಸಾಹಿತಿ ಎಸ್.ಎಂ. ಜನವಾಡಕರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಿ.ಕೆ.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಸುನೀಲ್ ಮಾಳಗೆ, ಡಾ. ಅಮರದೀಪ್, ಡಾ. ಬಸವರಾಜ ಬಲ್ಲೂರ, ಉಮೇಶ ಜಾಬಾ, ಡಾ.ನಸರಪ್ಪ ಮತ್ತಿತರರು ಇದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಮಚ್ಚೆ ಪ್ರಾಸ್ತಾವಿಕ ಮಾತನಾಡಿದರು. ದಯಾನಂದ ಬಂಬುಳಗಿ ಸ್ವಾಗತಿಸಿದರೆ ಪ್ರೇಮ ಅವಿನಾಶ ನಿರೂಪಿಸಿ. ಪ್ರಫುಲ್ ಕ್ರಿಸ್ಟೋಫರ್ ವಂದಿಸಿದರು.