ಅಂಧತ್ವ ಎನ್ನುವುದು ಶಾಪವಲ್ಲ, ಇದೊಂದು ಸೃಷ್ಟಿಯ ಪ್ರಕ್ರಿಯೆ. ಎಲ್ಲ ಅಂಗಗಳು ಸರಿಯಾಗಿದ್ದರೂ ಯಾವುದಕ್ಕೂ ಪ್ರಯೋಜನಕ್ಕಿಲ್ಲದಂತೆ ಸಾಕಷ್ಟು ಜನರಿದ್ದಾರೆ. ಆದರೆ, ಅಂಧರಾಗಿದ್ದುಕೊಂಡು ಹಲವು ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ನಾವಿಂದು ಕಾಣುತ್ತೇವೆ.
ಹುಬ್ಬಳ್ಳಿ:
ಅಂಧರು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಧನೆ ಮಾಡುವ ಮೂಲಕ ವಿಶ್ವಕ್ಕೆ ತೋರಿಸಿದ್ದಾರೆ. ಅಂಧ ಕ್ರಿಕೆಟ್ ಪಟುಗಳು ಯುವಕರಿಗೆ ಸ್ಫೂರ್ತಿ ನೀಡುವಂತಹ ಪಂದ್ಯಗಳನ್ನಾಡುವ ಮೂಲಕ ಇತರರಿಗೆ ಮಾರ್ಗದರ್ಶಕರಾಗುವಂತೆ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಕರೆ ನೀಡಿದರು.ಇಲ್ಲಿನ ಗುಜರಾತ್ ಭವನದಲ್ಲಿ ಭಾನುವಾರ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಇಂಡಸ್‌ಇಂಡ್ ಬ್ಯಾಂಕ್ ಸಹಯೋಗದಲ್ಲಿ ಐದು ದಿನಗಳ ವರೆಗೆ ಆಯೋಜಿಸಿರುವ ಪುರುಷರ ರಾಷ್ಟ್ರಮಟ್ಟದ ಅಂಧರ ಟಿ-20 ನಾಗೇಶ ಟ್ರೋಫಿ (ಗ್ರೂಪ್ ಸಿ) ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಧರ ರಾಷ್ಟ್ರಮಟ್ಟದ ಟಿ-20 ಕ್ರಿಕೆಟ್ ಪಂದ್ಯಾವಳಿಯು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಅಂಧತ್ವ ಎನ್ನುವುದು ಶಾಪವಲ್ಲ, ಇದೊಂದು ಸೃಷ್ಟಿಯ ಪ್ರಕ್ರಿಯೆ. ಎಲ್ಲ ಅಂಗಗಳು ಸರಿಯಾಗಿದ್ದರೂ ಯಾವುದಕ್ಕೂ ಪ್ರಯೋಜನಕ್ಕಿಲ್ಲದಂತೆ ಸಾಕಷ್ಟು ಜನರಿದ್ದಾರೆ. ಆದರೆ, ಅಂಧರಾಗಿದ್ದುಕೊಂಡು ಹಲವು ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ನಾವಿಂದು ಕಾಣುತ್ತೇವೆ ಎಂದು ಹೇಳಿದರು.ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಡಾ. ಮಾಂತೇಶ ಕಿವಡಸಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಕೆಂಬಾವಿ ಆರ್ಕಿಟೆಕ್ಚರ್ ಫೌಂಡೇಶನ್‌ನ ನಳಿನಿ ಕೆಂಬಾವಿ, ಗ್ಲೋಬಲ್ ಎಂಬಿಎ ಕಾಲೇಜಿನ ಡೈರಕ್ಟರ್ ಡಾ. ಸುಮನ್ ಕುಮಾರ, ಡಾ. ಆರ್.ಬಿ. ಮುಗದೂರ, ವಿಶ್ವನಾಥ ಹಿರೇಕರ, ಡಾ. ಸುನೀಲ ಗೋಕಲೆ ಸೇರಿದಂತೆ ಹಲವರಿದ್ದರು.
ಐದು ದಿನ ನಡೆಯುವ ಪಂದ್ಯನೈಋತ್ಯ ರೈಲ್ವೆಯ ಮೈದಾನದಲ್ಲಿ ಡಿ. 22ರಿಂದ 26ರ ವರೆಗೆ ಬೆಳಗ್ಗೆ 9ಕ್ಕೆ ಹಾಗೂ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಅಂಧ ಪುರುಷರ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಹಿಮಾಚಲ ಪ್ರದೇಶ, ರಾಜಸ್ತಾನ ತಂಡಗಳು ಪಾಲ್ಗೊಳ್ಳುತ್ತಿವೆ. ಜ. 22ರಂದು ಕರ್ನಾಟಕ-ಮಹಾರಾಷ್ಟ್ರ, ಹಿಮಾಚಲ ಪ್ರದೇಶ- ಕೇರಳ, ಡಿ. 23ರಂದು ರಾಜಸ್ಥಾನ-ಹಿಮಾಚಲ ಪ್ರದೇಶ, ಕೇರಳ-ಮಹಾರಾಷ್ಟ್ರ, ಡಿ. 24ರಂದು ಹಿಮಾಚಲ ಪ್ರದೇಶ- ಕೇರಳ, ಕರ್ನಾಟಕ- ರಾಜಸ್ಥಾನ, ಡಿ. 25ರಂದು ರಾಜಸ್ಥಾನ-ಕೇರಳ, ಹಿಮಾಚಲ ಪ್ರದೇಶ-ಕರ್ನಾಟಕ, ಡಿ. 26ರಂದು ರಾಜಸ್ಥಾನ-ಮಹಾರಾಷ್ಟ್ರ, ಕರ್ನಾಟಕ- ಕೇರಳ ತಂಡಗಳ ನಡುವೆ ಪಂದ್ಯ ನಡೆಯಲಿವೆ.