ಸಾರಾಂಶ
ಪೆರ್ಡೂರಿನಲ್ಲಿ ಹಿರಿಯೆರೊಟ್ಟಿಗೊಂಜಿ ದಿನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಪೆರ್ಡೂರುಇಲ್ಲಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಈ ವಿಶೇಷ ಕಾರ್ಯಕ್ರಮದಲ್ಲಿ ೬೦ರಿಂದ ೯೨ ವರ್ಷಗಳ ವರೆಗಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಸಂಭ್ರಮಿಸಿದ್ದು, ಕಾರ್ಯಕ್ರಮ ಅವರಲ್ಲಿ ಹೊಸ ಹುರುಪನ್ನು ನೀಡಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಿತಿ ಗೌರವಾಧ್ಯಕ್ಷ ಶಾಂತಾರಾಮ ಸೂಡ, ಇಂದಿನ ಕಾಲಮಾನದಲ್ಲಿ ವೃದ್ಧಾಪ್ಯ ಒಂದು ನೀರಸ ಜೀವನವಾಗಿ ಹೆಚ್ಚಿನವರು ಮನರಂಜನೆಯಿಂದ ವಂಚಿತರಾಗಿದ್ದಾರೆ. ಅಂತಹ ಹಿರಿಯರಿಗೆ ಇಂತಹ ಕಾರ್ಯಕ್ರಮಗಳು ಅತೀ ಅಗತ್ಯವಾಗಿದೆ. ಈ ಸಮಿತಿ ನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಹೊಸತನವನ್ನು ನೀಡುತ್ತಿರುವುದು ಸಂತಸದ ಸಂಗತಿ ಎಂದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ಸತೀಶ್ ಕೋಟ್ಯಾನ್ ಮಾತನಾಡಿ, ತಮ್ಮ ಜೀವನವಿಡೀ ಮಕ್ಕಳು, ಮೊಮ್ಮಕ್ಕಳು, ಕುಟುಂಬಕ್ಕಾಗಿ ನಿಸ್ವಾರ್ಥದಿಂದ ದುಡಿದು ಬಾಳಿನ ಮುಸ್ಸಂಜೆಯಲ್ಲಿ ನಿಸ್ತೇಜರಾಗಿ ಬದುಕುವಂತಹ ಪರಿಸ್ಥಿತಿ ಇಂದಿನ ಹಿರಿಯರದ್ದಾಗಿದೆ. ಅದನ್ನು ಗಮನಿಸಿ ಹಿರಿಯರೂ ಸಂತಸ, ಸಂಭ್ರಮದಿಂದ ಕಾಲಕಳೆಯಬೇಕು ಎಂದು ಹಿರಿಯರಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಲ್ಲಿ ಹಿರಿಯರು ಸಂಭ‍್ರಮಿಸಿದ ಪರಿ ಕಂಡಾಗ ಇಂತಹ ಕಾರ್ಯಕ್ರಮಗಳನ್ನು ಎಲ್ಲ ಊರುಗಳ ಸಂಘ-ಸಂಸ್ಥೆಗಳು ಮಾಡುವಂತಾಗಲಿ ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ ಆರೋಗ್ಯ ಸಹಾಯಕಿ, ಸೂಲಗಿತ್ತಿಯಾಗಿ ೩೭ ವರ್ಷ ಸೇವೆ ಸಲ್ಲಿಸಿರುವ ೮೦ರ ಹರಯದ ನಳಿನಿ ಸಿಸ್ಟರ್, ಹಿರಿಯ ಕಲಾವಿದ ಸುಧಾಕರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಮಂಡ್ಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ೨೦೨೩-೨೪ನೇ ಸಾಲಿನಲ್ಲಿ ‘ಚಿನ್ನದ ಪದಕ’ಕ್ಕೆ ಭಾಜನರಾದ ಸಮಿತಿಯ ಪದಾಧಿಕಾರಿ ಬುಕ್ಕಿಗುಡ್ಡೆ ಪ್ರಭಾಕರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.ಖ್ಯಾತ ಕಲಾವಿದ ಪಿ.ಎನ್. ಆಚಾರ್ಯ ಅವರು ಥ್ರೆಡ್ ಆರ್ಟ್ ಮತ್ತು ಪ್ರಕೃತಿ ಚಿತ್ರಗಳನ್ನ ರಚಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಹಲವು ಹಿರಿಯರು ತಮ್ಮಲ್ಲಿ ಹುದುಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್, ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ, ಉಪಾಧ್ಯಕ್ಷ ಪಳಜೆ ಪ್ರಮೋದ್ ರೈ ಹಾಗೂ ಕಾರ್ಯದರ್ಶಿ ರವೀಂದ್ರ ನಾಡಿಗ್ ಉಪಸ್ಥಿತರಿದ್ದರು.