ಸಾರಾಂಶ
ಯಲ್ಲಾಪುರ: ಮಲೆನಾಡಿನ ಪ್ರದೇಶಗಳಲ್ಲಿ ಕ್ರೀಡಾಕೂಟ ನಡೆಸುವುದು ಕಷ್ಟಸಾಧ್ಯ. ಪಾಲಕರು ತಮ್ಮ ಮಕ್ಕಳನ್ನು ಆತಂಕದಲ್ಲೇ ಕ್ರೀಡೆಗೆ ಕಳಿಸಬೇಕಾಗುತ್ತದೆ. ಇದು ನಿರಂತರ ನಡೆದುಬಂದಿದೆ. ಈ ಕುರಿತು ಶಿಕ್ಷಣ ಸಚಿವರ ಜತೆ ಚರ್ಚಿಸಿ, ಗಂಭೀರವಾಗಿ ಪರಿಗಣಿಸುವಂತೆ ಒತ್ತಡ ತರುತ್ತೇನೆ. ಕ್ರೀಡಾಕೂಟಗಳು ಗಣೇಶಚತುರ್ಥಿ ಮತ್ತು ನವರಾತ್ರಿಯ ನಡುವೆ ನಡೆಯುವಂತಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಆ. ೨೭ರಂದು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಆವಾರದಲ್ಲಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಕಾರವಾರ ಹಾಗೂ ಯಲ್ಲಾಪುರದ ವಿಶ್ವದರ್ಶನ ಪಿಯು ಕಾಲೇಜಿನ ಆಶ್ರಯದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ, ಕ್ರೀಡಾಜ್ಯೋತಿ ಸ್ವೀಕರಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಕ್ರೀಡೆಯನ್ನು ಕ್ರೀಡಾಮನೋಭಾವದಿಂದಲೇ ಆಡಿ. ಗೆಲುವು ಈ ವರ್ಷ ಬಾರದಿದ್ದರೂ ಮುಂದಿನ ವರ್ಷದಲ್ಲಿ ಗೆಲುವು ಪಡೆಯುವ ಸವಾಲನ್ನು ಸ್ವೀಕರಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಧ್ಯ ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಕೇವಲ ವೈದ್ಯರು, ಎಂಜಿನಿಯರ್ ಮಾಡುವುದಕ್ಕೇ ಸೀಮಿತಗೊಳ್ಳದೇ, ಪ್ರತಿಭಾವಂತ ಕ್ರೀಡಾಪಟು ಆಗಲು ಪ್ರೋತ್ಸಾಹ ನೀಡುವಂತಾಗಬೇಕು ಎಂದರು.ಹಿರಿಯ ಕ್ರೀಡಾಪಟು ಪದ್ಮನಾಭ ಶಾನಭಾಗ ಮಾತನಾಡಿದರು. ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ವೈಟಿಎಸ್ಎಸ್ ಪ್ರಾಚಾರ್ಯ ಆನಂದ ಹೆಗಡೆ, ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯರಾದ ಎಸ್.ಟಿ. ವೈದ್ಯ ಯಲ್ಲಾಪುರ, ದತ್ತಾತ್ರೆಯ ಭಟ್ಟ ಮಂಚೀಕೇರಿ ಉಪಸ್ಥಿತರಿದ್ದರು. ಪ್ರಭಾತ್ ಮತ್ತು ದಿಗಂತ್ ದೇಶಭಕ್ತಿಗೀತೆ ಹಾಡಿದರು.
ವಿಶ್ವದರ್ಶನ ಪಿಯು ಕಾಲೇಜು ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಭು ಅಗಡಿ ನಿರ್ವಹಿಸಿ, ವಂದಿಸಿದರು.