ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರದಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಬಿ.ಎನ್.ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ಎಂ.ಆರ್.ಮಂಜುನಾಥ್ ಅವಿರೋಧವಾಗಿ ಆಯ್ಕೆಗೊಂಡರು.ತಾಲೂಕಿನ ಭೂ ಅಭಿವೃದ್ಧಿ ಬ್ಯಾಂಕಿನ ಸಹಕಾರ ಸಂಘಕ್ಕೆ ೧೪ ನಿರ್ದೇಶಕರುಗಳು ಮುಂದಿನ ೫ ವರ್ಷಗಳ ಅವಧಿಗೆ ನೂತನವಾಗಿ ಚುನಾಯಿತರಾಗಿದ್ದು, ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಸಂಬಂಧ ಸಹಕಾರ ಇಲಾಖೆ ಬುಧವಾರದಂದು ಚುನಾವಣೆಯನ್ನು ನಿಗದಿಗೊಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಿರೀಸಾವೆ ಹೋಬಳಿಯ ಬೋರೇಗೌಡನ ಕೊಪ್ಪಲು ಗ್ರಾಮದ ನಿರ್ದೇಶಕ ಬಿ.ಎನ್.ಮಂಜುನಾಥ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಾಗುರು ಹೋಬಳಿ, ಮರವನಳ್ಳಿ ಗ್ರಾಮದ ಎಂ.ಆರ್.ಮಂಜುನಾಥ್ ನಾಮಪತ್ರ ಸಲ್ಲಿಸಿದರು, ಇವರಿರ್ವರನ್ನು ಹೊರತುಪಡಿಸಿ ಬೇರ್‍ಯಾರು ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ಎ.ಆರ್.ಬಾಲಚಂದ್ರ ಘೋಷಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಿಕಟ ಪೂರ್ವ ಅಧ್ಯಕ್ಷ ಎಂ.ಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್.ಮೂರ್ತಿ, ಗ್ಯಾರೆಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ್‌ಗೌಡ, ಕೆಡಿಪಿ ಸದಸ್ಯ ಯೋಗೀಶ್, ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಕೆ.ಮಂಜೇಗೌಡ, ನಾಗನಹಳ್ಳಿ ಮಂಜೇಗೌಡ ಸೇರಿ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು, ಅವರ ಅಭಿಮಾನಿಗಳು, ಸ್ನೇಹಿತರು ಶಾಲು ಮತ್ತು ಹೂವಿನ ಹಾರ ಹಾಕಿ ಅಭಿನಂದಿಸಿದರು.ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಬಿ.ಎನ್.ಮಂಜುನಾಥ್, ನನ್ನ ಆಯ್ಕೆಗೆ ಸಹಕರಿಸಿದ ಎಲ್ಲಾ ನಿರ್ದೇಶಕರುಗಳು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ನಮ್ಮ ಪಿಎಲ್‌ಡಿ ಬ್ಯಾಂಕಿನ ಎಲ್ಲಾ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು ಸೇರಿದಂತೆ ಪಕ್ಷಾತೀತವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, ಸ್ವತಂತ್ರ ಪೂರ್ವದಲ್ಲಿ ಆರಂಭವಾದ ಬ್ಯಾಂಕಿನಲ್ಲಿ ೨೦ಸಾವಿರಕ್ಕೂ ಹೆಚ್ಚು ಸದಸ್ಯ ರೈತರಿದ್ದು, ಸುಮಾರು ೬ ಕೋಟಿಯಷ್ಟು ಸಾಲ ನೀಡಲಾಗಿದೆ. ಕಳೆದ ವರ್ಷ ಶೇ.೨೫ರಷ್ಟು ಸಾಲ ವಸೂಲಾತಿಯಾಗಿದ್ದು, ಸ್ವಂತ ಬಂಡವಾಳ ಒಂದುವರೆ ಕೋಟಿ ಇದ್ದು, ಇದನ್ನು ರೈತರಿಗೆ ಸಾಲ ನೀಡಲಾಗಿದೆ. ಕಳೆದ ಸಾಲಿನಲ್ಲಿ ೪ ಕೋಟಿ ರು. ನಷ್ಟು ಹಣ ಸುಸ್ತಿಯಾಗಿದ್ದು, ಇದೀಗ ನಮ್ಮ ಅವಧಿಯಲ್ಲಿ ಸುಸ್ತಿಯಾಗಿರುವ ಸಾಲವನ್ನು ಮರುಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಇನ್ನೂ ಹೆಚ್ಚು ಸಾಲವನ್ನ ರೈತರಿಗೆ ನೀಡಲು ಬದ್ಧನಾಗಿದ್ದು, ಇದಕ್ಕಾಗಿ ರೈತರು ಪಡೆದ ಸಾಲವನ್ನು ನಿಯಮಿತ ಕಾಲಾವಧಿಯೊಳಗೆ ಮರು ಪಾವತಿಗೆ ಮುಂದಾಗಬೇಕು ಎಂದರು.
ಈ ವೇಳೆ ಬ್ಯಾಂಕ್‌ನ ನೂತನ ನಿರ್ದೇಶಕರುಗಳಾದ ಎ.ಬಿ.ನಂಜುಂಡೇಗೌಡ, ಎಂ.ಶಂಕರ್, ಎನ್.ಟಿ.ಬೊಮ್ಮೇಗೌಡ, ನಂಜುಂಡೇಗೌಡ ಗುಳ್ಳಹಳ್ಳಿ. ಕೆ.ಟಿ.ನಟೇಶ್, ಕೆ.ಆರ್.ಬಾಬು, ಎಸ್.ಕೆ.ರಾಘವೇಂದ್ರ, ಎಮ್.ಎ.ಕುಮಾರಸ್ವಾಮಿ, ಶಂಕರಲಿಂಗೇಗೌಡ, ಭಾರತಿ ಪಾಂಡು, ಕನ್ಯಾಕುಮಾರಿ ಬಾಲಣ್ಣ, ಮಧುಕುಮಾರ್, ಬಿ.ಕೇಶವ, ಸೇರಿ ಬ್ಯಾಂಕಿನ ವ್ಯವಸ್ಥಾಪಕ ಜಗದೀಶ್, ಕಾರ್ಯದರ್ಶಿ ಎಂ.ಎಸ್.ಧರ್ಮ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಇದ್ದರು.