ರೈತರಿಗೆ ಸಾಲ ನೀಡುವ ನೆಪದಲ್ಲಿ ಆಮಿಷವೊಡ್ಡಿ, ಬಳಿಕ ಸಾಲದ ಕಂತು ಪಾವತಿಸಲು ವಿಳಂಬವಾದ ಸಂದರ್ಭದಲ್ಲಿ ಕಿರುಕುಳ ನೀಡುತ್ತಿರುವ ಹಣಕಾಸು ಸಂಸ್ಥೆಗಳ ವಿರುದ್ಧ ಜಿಲ್ಲೆ ಹಾಗೂ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ರಾಜ್ಯಾಧ್ಯಕ್ಷೆ ನಾಗರತ್ನ ಚಿನ್ನೆನಹಳ್ಳಿ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ತಮ್ಮ ಚನ್ನರಾಯಪಟ್ಟಣದ ತಾಲ್ಲೂಕಿನಲ್ಲೇ ಈಗಾಗಲೇ ಸುಮಾರು ೧೦ ಮನೆಗಳಿಗೆ ಬೀಗ ಹಾಕಲಾಗಿದ್ದು, ಅಷ್ಟೇ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಹಾಸನ
ರೈತರಿಗೆ ಸಾಲ ನೀಡುವ ನೆಪದಲ್ಲಿ ಆಮಿಷವೊಡ್ಡಿ, ಬಳಿಕ ಸಾಲದ ಕಂತು ಪಾವತಿಸಲು ವಿಳಂಬವಾದ ಸಂದರ್ಭದಲ್ಲಿ ಕಿರುಕುಳ ನೀಡುತ್ತಿರುವ ಹಣಕಾಸು ಸಂಸ್ಥೆಗಳ ವಿರುದ್ಧ ಜಿಲ್ಲೆ ಹಾಗೂ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ರಾಜ್ಯಾಧ್ಯಕ್ಷೆ ನಾಗರತ್ನ ಚಿನ್ನೆನಹಳ್ಳಿ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಹಣಕಾಸು ಸಂಸ್ಥೆಗಳು ( ಫೈನಾನ್ಸ್)ಗಳು ರೈತರನ್ನು ಸಂಪರ್ಕಿಸಿ ಸಾಲ ನೀಡಲು ಮುಂದಾಗುತ್ತಿವೆ. ಆರಂಭದಲ್ಲಿ ಸುಲಭವಾಗಿ ಸಾಲ ಸಿಗುತ್ತದೆ ಎಂದು ನಂಬಿಸಿ ಸಾಲ ನೀಡಲಾಗುತ್ತದೆ. ರೈತರು ಮೊದಲ ಒಂದು, ಎರಡು ಅಥವಾ ಮೂರು ಕಂತುಗಳನ್ನು ಪಾವತಿಸಿದ ಬಳಿಕ ಮುಂದಿನ ಕಂತು ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದಾಗ, ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ಒತ್ತಡ ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಸಾಲದ ಕಂತು ಪಾವತಿಸಲು ಸಾಧ್ಯವಾಗದೇ ಹೋದರೆ, ಅವರಿಗೆ ಕಾಲಾವಕಾಶ ನೀಡುವ ಬದಲು ಹಲವು ಕಂತುಗಳನ್ನು ಬಾಕಿ ಮಾಡಿಸಿ ಬಳಿಕ ಮನೆಗಳಿಗೆ ಬೀಗ ಹಾಕುವಂತಹ ಕ್ರಮಗಳಿಗೆ ಮುಂದಾಗುತ್ತಿದ್ದಾರೆ. ಇದರಿಂದ ರೈತ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಚನ್ನರಾಯಪಟ್ಟಣದ ತಾಲ್ಲೂಕಿನಲ್ಲೇ ಈಗಾಗಲೇ ಸುಮಾರು ೧೦ ಮನೆಗಳಿಗೆ ಬೀಗ ಹಾಕಲಾಗಿದ್ದು, ಅಷ್ಟೇ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ದೂರಿದರು.ರೈತ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಕ್ರಮಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು. ರೈತರ ಮನೆಗಳಿಗೆ ಬೀಗ ಹಾಕಿ ಕುಟುಂಬಗಳನ್ನು ಬೀದಿಗೆ ತಳ್ಳಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಇದೇ ವೇಳೆ ರೈತ ಸಂಘದ ರವಿಕುಮಾರ್, ಮಂಜು, ರಾಜಕುಮಾರ್, ಪ್ರೇಮಮ್ಮ, ರಾದಮ್ಮ, ಶಿವಣ್ಣ, ಪುನಿತ್, ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.