ಸಾರ್ವಜನಿಕರಿಗೆ ‘ಸಂವಿಧಾನ’ ಪ್ರತಿಜ್ಞೆ

| Published : Feb 09 2024, 01:51 AM IST

ಸಾರಾಂಶ

ಸಂವಿಧಾನ ಜಾಗೃತಿ ಅಭಿಯಾನ ರಥವು ಗ್ರಾಪಂಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಪ್ರದೇಶದ್ವಾರದಿಂದ ವೇದಿಕೆ ಸ್ಥಳದವರೆಗೆ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಹಾಸನ

ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿರುವ ಸಂವಿಧಾನ ಜಾಗೃತಿ ಜಾಥಾ ರಥವು ಗುರುವಾರ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ, ಎಮ್. ಹೂಸೂರು, ಬಾಳಗಂಚಿ, ಜಿನ್ನೆನಹಳ್ಳಿ, ಮತ್ತಿಘಟ್ಟ, ಸಕಲೇಶಪುರ ತಾಲೂಕಿನ ಆನೇಮಹಲ್, ಹೆಬ್ಬಸಾಲೆ, ಕ್ಯಾಮನಹಳ್ಳಿ ಸೇರಿ ಸಂವಿಧಾನ ಜಾಗೃತಿ ಅಭಿಯಾನ ರಥವು ಗ್ರಾಪಂಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಪ್ರದೇಶದ್ವಾರದಿಂದ ವೇದಿಕೆ ಸ್ಥಳದವರೆಗೆ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಆಯಾ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳೊಂದಿಗೆ ಹಾಗೂ ಪೂರ್ಣಕುಂಭದ ಜೊತೆಗೆ ಸ್ಥಳೀಯ ಗ್ರಾಮಸ್ಥರು ಅದ್ಧೂರಿಯಾಗಿ ರಥವನ್ನು ಬರಮಾಡಿಕೊಂಡರು.

ಸಕಲೇಶಪುರ ತಾಲೂಕಿನ ಬಾಳಗಂಚಿ ಗ್ರಾಮದಲ್ಲಿ ವಿಶೇಷವಾಗಿ ಏರ್ಪಡಿಸಿದ್ದ ಹುಲಿ ವೇಷಧಾರಿಗಳ ನೃತ್ಯ ಜಾಥಾದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಎಲ್ಲಾ ಗ್ರಾಪಂಗಳಲ್ಲಿ ಸ್ಥಳೀಯವಾಗಿ ವೇದಿಕೆ ಕಾರ್ಯಕ್ರಮ ಆಯೋಜಿಸಿ ಡಾ. ಅಂಬೇಡ್ಕರ್ ರ ಭಾವಚಿತ್ರಕ್ಕೆ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳನ್ನು ಸೇರಿಸಿ ಸಂವಿಧಾನ ಮಾಹಿತಿಯುಳ್ಳ ಸಂವಿಧಾನದ ಪೀಠಿಕೆ ಹಂಚಲಾಯಿತು, ಸಂವಿಧಾನದ ಆಶಯಗಳನ್ನೂ ಪಾಲಿಸುವಂತೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು.

ಸಂವಿಧಾನದಲ್ಲಿ ಒದಗಿಸಲಾಗಿರುವ ಹಕ್ಕುಗಳು ಮತ್ತು ನಾಗರಿಕರ ಕರ್ತವ್ಯಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ಮತದಾನದ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.