ಸಾರಾಂಶ
ಎಂ.ಕೆ.ಹರಿಚರಣ ತಿಲಕ್
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪಟ್ಟಣ ದಿನ ಕಳೆದಂತೆ ಬೆಳೆಯಲಾರಂಭಿಸಿದೆ. ಇದಕ್ಕೆ ತಕ್ಕಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ (ಟೌನ್ ಕ್ಲಬ್ ಹತ್ತಿರ) ಮತ್ತು ಜಯನಗರ ಬಡಾವಣೆಯ ಸಾರ್ವಜನಿಕ ಆಸ್ಪತ್ರೆಯ ಮುಂದೆ ಬಸ್ ಹತ್ತುವ ಹಾಗೂ ಇಳಿಯುವ ಪ್ರಯಾಣಿಕರಿಗೆ ಬಸ್ ತಂಗುದಾಣವಿಲ್ಲದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲೇ ಮಳೆ-ಬಿಸಿಲಲ್ಲಿ ಬಸ್‌ಗಾಗಿ ಕಾಯುತ್ತಾ ನಿಲ್ಲುವ ಸ್ಥಿತಿ ಎದುರಾಗಿದೆ.
ಹೇಮಾವತಿ ಬಡಾವಣೆಯ ನಿವಾಸಿಗಳು ಸೇರಿದಂತೆ ಆ ಭಾಗದ ಕೆಲವು ಗ್ರಾಮೀಣ ಭಾಗದ ಜನರು ನೂರಾರು ಸಂಖ್ಯೆಯಲ್ಲಿ ಚನ್ನರಾಯಪಟ್ಟಣ, ಹಾಸನ, ಅರಸೀಕೆರೆ, ಶಿವಮೊಗ್ಗ ಸೇರಿದಂತೆ ಹಲವು ನಗರಗಳಿಗೆ ಪ್ರಯಾಣಿಸಲು ಟೌನ್ ಕ್ಲಬ್ ಹತ್ತಿರ ಬಸ್ಸಿಗಾಗಿ ಕಾಯುತ್ತಿರುತ್ತಾರೆ.ಅದೇ ರೀತಿ ಜಯನಗರ ಬಡಾವಣೆಯ ಸಾರ್ವಜನಿಕ ಆಸ್ಪತ್ರೆಯ ಮುಂದೆ ಗ್ರಾಮೀಣ ಪ್ರದೇಶದ ರೋಗಿಗಳು ಮತ್ತು ಅವರ ಕುಟುಂಬಸ್ಥರು ತಮ್ಮ ಸ್ವಗ್ರಾಮಗಳಿಗೆ ತೆರಳಲು ರಸ್ತೆ ಬದಿ ಕಾದು ನಿಲ್ಲುತ್ತಾರೆ. ಆದರೆ, ಪ್ರಯಾಣಿಕರಿಗೆ ಬಸ್ ತಂಗುದಾಣವಿಲ್ಲ. ಬಸ್‌ಗಳು ಬರುವವರೆಗೂ ಮಳೆ, ಬಿಸಿಲಿನಲ್ಲಿ ಫುಟ್‌ಪಾತ್‌ನಲ್ಲೇ ನಿಂತು ಬಸ್ಸಿಗಾಗಿ ಕಾಯಬೇಕಿದೆ.
ಪುರಸಭೆ ಸೇರಿದಂತೆ ಶಾಸಕರ ಅನುದಾನದಿಂದಲೂ ಬಸ್ಸಿಗಾಗಿ ಕಾಯುವ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ತಂಗುದಾಣದ ವ್ಯವಸ್ಥೆ ಮಾಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ..ಶೆಲ್ಟರ್ ನಿರ್ಮಾಣ ಅವೈಜ್ಞಾನಿಕ, ಅತಿಕ್ರಮಣ:
ಪಟ್ಟಣದ ಟೌನ್ ಕ್ಲಬ್ ಬಳಿ ಹೇಮಾವತಿ ಕಚೇರಿಯ ಮುಂದೆ ಮತ್ತು ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಮುಂದೆ ಈ ಹಿಂದೆ ಬಸ್ ನಿಲ್ದಾಣಗಳನ್ನು ಅಂದಿನ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗಿದೆ. ಈ ಬಸ್ ಶೆಲ್ಟರ್‌ಗಳನ್ನು ಪ್ರಯಾಣಿಕರು ಬಸ್ ಹತ್ತುವ ಜಾಗದ ರಸ್ತೆ ಬದಿಯಲ್ಲಿ ನಿರ್ಮಿಸುವ ಬದಲು ಪ್ರಯಾಣಿಕರು ಬಸ್‌ನಿಂದ ಇಳಿಯುವ ಕಡೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪ್ರಯಾಣಿಕರ ಈ ಬಸ್ ನಿಲ್ದಾಣಗಳು ವಾಣಿಜ್ಯ ಅಂಗಡಿಗಳಾಗಿ ಪರಿವರ್ತಿತವಾಗಿವೆ. ಸಾರ್ವಜನಿಕರ ಬಳಕೆಯ ಉದ್ದೇಶಕ್ಕೆ ನಿರ್ಮಿಸಿದ್ದ ಬಸ್ ಶೆಲ್ಟರುಗಳು ಅತಿಕ್ರಮಣಕ್ಕೆ ಒಳಗಾಗಿರುವ ಪರಿಣಾಮ ಪಟ್ಟಣದ ಟೌನ್ ಕ್ಲಬ್ ಬಳಿ ಮಾತ್ರವಲ್ಲ ಸಾರ್ವಜನಿಕ ಆಸ್ಪತ್ರೆಯ ಬಳಿಯೂ ರೋಗಿಗಳು ಮತ್ತು ಅವರ ಕುಟುಂಬಸ್ಥರು ಬಸ್ ಹತ್ತಲು ಬಿಸಿಲು ಮಳೆಯಲ್ಲಿಯೇ ನಿಂತು ಕಾಯ್ದು ಬಸ್ ಹತ್ತಬೇಕಾಗಿದೆ.ಟೌನ್ ಕ್ಲಬ್ ಬಳಿ ಬಸ್ ನಿಲ್ಲಿಸೋಲ್ಲ:
ಮೈಸೂರಿನಿಂದ ಕೆ.ಆರ್.ಪೇಟೆಗೆ ಬರುವ ಬಸ್ಸುಗಳು ಟಿ.ಬಿ.ಸರ್ಕಲ್ ಮತ್ತು ಕೇಂದ್ರ ಬಸ್ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಇಳಿಸುತ್ತಾರೆ. ಅಲ್ಲಿಂದ ಮುಂದೆ ಹೇಮಾವತಿ ಬಡಾವಣೆಯ ಟೌನ್ ಕ್ಲಬ್ ಬಳಿ ಪ್ರಯಾಣಿಕರನ್ನು ಇಳಿಸಲು ನಿರಾಕರಿಸುತ್ತಾರೆ. ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಹೇಮಾವತಿ ಬಡಾವಣೆ ಸುಮಾರು ಎರಡು ಕಿ.ಮೀ.ದೂರವಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಮೈಸೂರು ಕಡೆಯಿಂದ ಬರುವ ಪ್ರಯಾಣಿಕರು ಟೌನ್ ಕ್ಲಬ್ ಬಳಿ ಇಳಿಯಲು ಅನುಕೂಲವಾಗುವಂತೆ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.ಪಟ್ಟಣದ ಟೌನ್ ಕ್ಲಬ್ ಹತ್ತಿರ ಹಾಗೂ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಸಾರ್ವಜನಿಕ ಬಸ್ ಶೆಲ್ಟರ್ ನಿರ್ಮಿಸುವಂತೆ ಪಟ್ಟಣ ನಿವಾಸಿಗಳಾದ ಟಿಎಪಿಸಿಎಂಎಸ್ ಚೇತನ್‌ಕುಮಾರ್, ಎ.ಎಸ್.ರವಿ, ಕೃಷ್ಣೇಗೌಡ, ಜಯರಾಮು, ಕೆಂಪೇಗೌಡ, ಕೆ.ಆರ್.ಮಂಜುನಾಥ್, ಹರೀಶ್ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))