ಸಾರಾಂಶ
ಮಹೇಶ ಛಬ್ಬಿ ಮುಳಗುಂದ
ಬಡವರು ಸ್ವಂತ ಸೂರಿಗಾಗಿ ಅವರಿವರ ಕೈಕಾಲು ಹಿಡಿದು ಸರ್ಕಾರದಿಂದ ನಿವೇಶನ ಪಡೆದು ತಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಳ್ಳಬೇಕೆಂಬ ಕನಸು ಮುಳಗುಂದ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಕನಸಾಗಿ ಉಳಿದಿದೆ. ನಿವೇಶನ ಸಿಕ್ಕರೂ ಮನೆ ನಿರ್ಮಾಣ ಮಾಡಿಕೊಳ್ಳಲು ಫಲಾನುಭವಿಗಳು ಪಂಚಾಯಿತಿಗೆ ಅಲೆಯುವುದು ಮಾತ್ರ ತಪ್ಪಿಲ್ಲ.ಮನೆ ಇಲ್ಲದ ಬಡವರಿಗೆ ವಿವಿಧ ವಸತಿ ಯೋಜನೆಯಡಿ ಮುಳಗುಂದ ಪಪಂ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಿದೆ. ಆದರೆ ಮನೆ ನಿರ್ಮಾಣ ಕಾರ್ಯ ಇನ್ನೂ ಕೈಗೊಡುತ್ತಿಲ್ಲ. ಅರ್ಹ ಫಲಾನುಭವಿಗಳು ಚಾತಕ ಪಕ್ಷಿಯಂತೆ ಎದುರು ನೋಡುವ ಸ್ಥಿತಿ ಉಂಟಾಗಿದೆ.
2002ರ ಹಿಂದೆ ಪಪಂ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಮತ್ತು ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದೇ ಕೊನೆ. ಈ ಕಾರ್ಯ ಪ್ರಗತಿ ಕಂಡಿಲ್ಲ. ಸದ್ಯ ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಹತ್ತಾರು ಎಕರೆ ಭೂಮಿ ಖರೀದಿಸಿದೆ. ಆದರೆ 2002ರಿಂದ ಇತ್ತೀಚೆಗೆ ಒಂದೂ ಮನೆ ನಿರ್ಮಾಣ ಸಾಧ್ಯವಾಗಿಲ್ಲ. ಕಾರಣ ನಿವೇಶನ ಹಂಚಿಕೆ ವಿಳಂಬವಾಗಿದೆ. ಗದಗ ರಸ್ತೆಯ ಕೊರಮ್ಮ ಗುಡಿ ಹಿಂಭಾಗದಲ್ಲಿ ಸರ್ವೇ ನಂ. 183/3ರಲ್ಲಿ ಪರಿಶಿಷ್ಟ ಜಾತಿ ಬಡವರಿಗೆ ಜಿ-ಪ್ಲಸ್ ಮನೆಗಳ ನಿರ್ಮಾಣ ಉದ್ದೇಶದಿಂದ 2018ರಲ್ಲಿ 3 ಎಕರೆ ಭೂಮಿ ಖರೀದಿ ಮಾಡಲಾಗಿತ್ತು. ಆದರೆ ಉದ್ದೇಶಿತ ಮನೆಗಳ ನಿರ್ಮಾಣ ಸಾಧ್ಯವಾಗದ ಕಾರಣ ಈ ಯೋಜನೆ ಕೈಬಿಡಲಾಯಿತು. ಅರ್ಹ ಫಲಾನುಭವಿಗಳಿಗೆ ಈಗಷ್ಟೆ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ.ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ: ಆದರೆ ಉದ್ದೇಶಿತ ಪ್ರದೇಶದಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ. ಕಚ್ಚಾ ರಸ್ತೆ, ಚರಂಡಿ ಹಾಗೂ ಉದ್ಯಾನ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಬಿಟ್ಟರೆ ಬೇರೇನೂ ಸೌಲಭ್ಯಗಳ ಕಾಮಗಾರಿ ನಡೆದಿಲ್ಲ. ಸೀತಾಲಹರಿ ಗ್ರಾಮದ ಹತ್ತಿರ ಸರ್ವೇ ನಂ. 383/1 2018ರಲ್ಲಿ 2.67 ಗುಂಟೆ ಎಕರೆ ಭೂಮಿ ಖರೀದಿಸಿ ನಿವೇಶನಗಳ ಗುರುತು ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲೂ ಸೌಲಭ್ಯ ಕಲ್ಪಿಸಲಾಗಿಲ್ಲ. ಜತೆಗೆ ಫಲಾನುಭವಿಗಳಿಗೆ ಸಮರ್ಪಕ ನಿವೇಶನ ಹಕ್ಕುಪತ್ರ ಹಂಚಿಕೆ ನಡೆದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ನಿವೇಶನ ವಿತರಣೆಗೆ ಜಾಗ ಖರೀದಿಸಿ ಐದಾರು ವರ್ಷಗಳಾದರೂ ಇನ್ನೂ ಸರಿಯಾಗಿ ಹಕ್ಕುಪತ್ರ ಸಿಕ್ಕಿಲ್ಲ. ಸಿಕ್ಕವರಿಗೂ ಮನೆಗಳ ನಿರ್ಮಾಣ ಸಾಧ್ಯವಾಗದ ಸ್ಥಿತಿ ಇದೆ. ಸ್ಥಳೀಯ ಆಡಳಿತ ಎಚ್ಚೆತ್ತು ಆಶ್ರಯ ನಿವೇಶನ ಕಾಲನಿ ಅಭಿವೃದ್ಧಿಪಡಿಸಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.ಪ್ರತ್ಯೇಕ ಅನುದಾನ ಬಂದಿಲ್ಲ. ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಂಡ ಆನಂತರ ಹಂತ ಹಂತವಾಗಿ 5ನೇ ಹಣುಕಾಸು ಹಾಗೂ ಎಸ್ಎಫ್‌ಸಿ ಅನುದಾನದ ಅಡಿಯಲ್ಲಿ ಎಲ್ಲೆಲ್ಲಿ ಅವಶ್ಯಕತೆ ಇರುತ್ತದೆಯೋ ಅಲ್ಲೆಲ್ಲ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತದೆ. ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಮುಳಗುಂದ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ತಿಳಿಸಿದ್ದಾರೆ.