ಸಾರಾಂಶ
ಬಳ್ಳಾರಿ: ಕೈಗಾರಿಕೆ ಸ್ಥಾಪನೆಗೆಂದು ವಶಪಡಿಸಿಕೊಂಡ ಕುಡಿತಿನಿ ಸುತ್ತಲಿನ ಗ್ರಾಮಗಳ ರೈತರ ಸಾಗುವಳಿ ಜಮೀನಿಗೆ ಸೂಕ್ತ ಬೆಲೆ ನಿಗದಿಗೊಳಿಸಿ, ಜೂನ್ ವೇಳೆಗೆ ವಿತರಣೆ ಮಾಡಬೇಕು. ಇಲ್ಲದಿದ್ದರೆ ರೈತರು ತಮ್ಮ ಜಮೀನುಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಮಾಡಲಿದ್ದಾರೆ ಎಂದು ರೈತ ಸಂಘದ ಉಪಾಧ್ಯಕ್ಷ ಯು.ಬಸವರಾಜ್ ಎಚ್ಚರಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ 2010ರಲ್ಲಿ ಕುಡುತಿನಿ ಸುತ್ತಮುತ್ತಲ ಗ್ರಾಮಗಳ ರೈತರ ಸಾಗುವಳಿ ಭೂಮಿಯನ್ನು ಮೋಸದ ಬೆಲೆ ನಿಗದಿ ಮಾಡಿ ಖರೀದಿ ಮಾಡಲಾಗಿದೆ ಎಂದರು.ಇದನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ ಅನ್ಯಾಯ ಸರಿಪಡಿಸಿ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಇದರಿಂದ 13 ಸಾವಿರಕ್ಕೂ ಹೆಚ್ಚಿನ ರೈತ ಕುಟುಂಬಗಳು ಅದರಲ್ಲಿ ಪರಿಶಿಷ್ಟ ಜಾ, ಪರಿಶಿಷ್ಟ ಪಂಗಡದ ಹಾಗೂ ದೇವದಾಸಿ ಮಹಿಳೆಯರು ಸೇರಿದಂತೆ ಶೇ.25 ಬಡ ರೈತ ಕುಟುಂಬಗಳಿಗೆ ಅನ್ಯಾಯದ ಭೂ ಬೆಲೆಯಿಂದ ಸಂತ್ರಸ್ತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದು ಸುಮಾರು ಒಂದು ವರ್ಷವಾದರೂ ರೈತರಿಗೆ ಆಶಾದಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದರೂ ಪರಿಹಾರ ಸಿಕ್ಕಿಲ್ಲ ಎಂದರು.
ಇದೇ ರೀತಿ ರಾಜ್ಯದ ದೇವನಹಳ್ಳಿ, ಆನೇಕಲ್ ತಾಲೂಕು ಸೇರಿದಂತೆ ಹಲವೆಡೆ ರೈತರಿಗೆ ವಂಚಿಸಲಾಗಿದೆ. ಭೂ ಸಂತ್ರಸ್ತರ ರೈತರ ರಾಜ್ಯ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆದಿದ್ದು, ಆರ್ಥಿಕ ತಜ್ಞರು ಹಾಗೂ ಬುದ್ಧಿಜೀವಿಗಳ ಹಾಗೂ ರೈತ ಮುಖಂಡರ ಸಭೆ ಸೇರಿ ಅನ್ಯಾಯದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ಸರ್ಕಾರದ ವಿಳಂಬ ನೀತಿ ಪ್ರತಿಭಟಿಸಿ ರಾಜ್ಯಮಟ್ಟದ ಚಳವಳಿ ತೀವ್ರಗೊಳಿಸಲಾಗುವುದು. ರೈತರ ತಾಳ್ಮೆಯನ್ನು ಸರ್ಕಾರಗಳ ಹಗುರವಾಗಿ ಪರಿಣಗಣಿಸಬಾರದು. ಜೂನ್ ಒಳಗಡೆ ನಮ್ಮ ಹೋರಾಟದ ಬೇಡಿಕೆಗಳನ್ನು ಇತ್ಯರ್ಥಗಳಿಸದೆ ಹೋದಲ್ಲಿ ನಮ್ಮ ಭೂಮಿಯನ್ನು ನಾವು ವಶಪಡಿಸಿಕೊಳ್ಳುತ್ತೇವೆ. ಈ ವರ್ಷದ ಮುಂಗಾರು ಬೆಳೆಯನ್ನು ಉಳುಮೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ. ಸತ್ಯಬಾಬು ಮಾತನಾಡಿ, 2023 ನವಂಬರ್ 14ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು. ಕಳೆದ ತಿಂಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಗಿದೆ. ರೈತರಿಗೆ ನೀಡಿದ ಅನ್ಯಾಯದ ಭೂ ಬೆಲೆಯ ಸರಿಪಡಿಸುವ ಕುರಿತು ಸುಪ್ರೀಂ ಕೋರ್ಟಿನ ಆದೇಶಾನುಸಾರ ಪರಿಹಾರ ನೀಡಲು ರೈತರ ಪರ ಸರ್ಕಾರ ಮಧ್ಯ ಪ್ರವೇಶ ಮಾಡಲಾಗುವುದಾಗಿ ಹೇಳಿತ್ತು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಜನವಾದಿ ಮಹಿಳಾ ಸಂಘಟನೆಯ ಜೆ.ಚಂದ್ರಕುಮಾರಿ ಸುದ್ದಿಗೋಷ್ಠಿಯಲ್ಲಿದ್ದರು.