ಸಾರಾಂಶ
ಆನಂದಪುರ: ಆನಂದಪುರ ಸುತ್ತಮುತ್ತ ಮನೆ ಅಂಗಳದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಆನಂದಪುರ: ಆನಂದಪುರ ಸುತ್ತಮುತ್ತ ಮನೆ ಅಂಗಳದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮೂಡಹಗಲು ಲಕ್ಷ್ಮಣಪ್ಪ ಎಂಬುವರ ತೋಟಕ್ಕೆ ನೀರು ಬಿಡಲು ಹೋದಾಗ ಅಡಕೆ ತೋಟದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಭಯದಿಂದ ಮನೆಗೆ ಓಡಿ ಬಂದ ಅವರ ಮಗ ಮನೆಯವರಲ್ಲಿ ವಿಚಾರ ತಿಳಿಸಿದ್ದು, ತಕ್ಷಣ ಮನೆಯವರು ಕೂಗಿ ಗಲಾಟೆ ಮಾಡಿದ ಬಳಿಕ ತೋಟದಿಂದ ಕಾಡಾನೆಗಳು ಹೊರ ಹೋಗಿವೆ.ಗ್ರಾಮದ ಅಡಕೆ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿದ್ದು, ಗ್ರಾಮಸ್ಥರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಕಳೆದ 15 – 20 ದಿನಗಳಿಂದ ಈ ಭಾಗದ ರೈತರು ಕಾಡಾನೆ ದಾಳಿಗಳ ಬಗ್ಗೆ ಆತಂಕದಲ್ಲಿದ್ದಾರೆ. ಶುಕ್ರವಾರ ಬೆಳಗ್ಗೆ ಮೂಡಹಗಲು ಗ್ರಾಮದ ಲಕ್ಷ್ಮಣಪ್ಪ ಎಂಬುವರ ಮನೆಯ ಅಂಗಳಕ್ಕೆ ಕಾಡಾನೆಗಳು ಬಂದಿದ್ದು, ಮನೆಯವರು ಭಯ ಭೀತರಾಗಿದ್ದಾರೆ.ಸ್ಥಳೀಯ ಗ್ರಾಮಸ್ಥರು ಮತ್ತು ರೈತರು ಆನೆಗಳನ್ನು ಓಡಿಸಲು ಮುಂದಾಗಿದ್ದು, ಅಲ್ಲಿಂದ ಕಾಡಾನೆಗಳು ಲಕ್ಕವಳ್ಳಿ ಗ್ರಾಮದ ತೋಟಗಳ ಮೂಲಕ ಹಾದು ಹೋಗಿವೆ. ಹಲವಾರು ದಿನಗಳ ಕಾಲ ಕಾಡಿನ ಅಂಚಿನಲ್ಲೇ ಸಂಚರಿಸುತ್ತಿದ್ದಂತಹ ಆನೆಗಳು ಮನೆಯ ಅಂಗಳಕ್ಕೆ ಬರಲು ಆರಂಭಿಸಿವೆ. ಆನೆಗಳು ಗ್ರಾಮಕ್ಕೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಚೋರಡಿ ವಲಯ ಅರಣ್ಯಾಧಿಕಾರಿ ರವಿ ಪೂಜಾರಿ ಸೇರಿದಂತೆ ಎಲ್ಲಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆನೆಗಳ ಹುಡುಕಾಟ ಪ್ರಾರಂಭಿಸಿದ್ದಾರೆ.