ಸಾರಾಂಶ
ಪ್ರಧಾನಿ ಮೋದಿ ಜನರಿಗೆ ಮೋಸ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ನದಿಗಳನ್ನು ಜೋಡಣೆ ಮಾಡುವ ಕನಸ್ಸನ್ನು ಜನರಲ್ಲಿ ಬಿತ್ತಿ ಅವುಗಳನ್ನು ಪೂರ್ಣಗೊಳಿಸಲು ಮೋದಿ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಕಳೆದ 10 ವರ್ಷದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವುದರ ಜೊತೆಗೆ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳ ಆಧಾರದ ಮೇಲೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದರು.ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆ ತರುತ್ತೇವೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಮತ ಪಡೆದು ಪ್ರಧಾನಿ ಮೋದಿ ಜನರಿಗೆ ಮೋಸ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ನದಿಗಳನ್ನು ಜೋಡಣೆ ಮಾಡುವ ಕನಸ್ಸನ್ನು ಜನರಲ್ಲಿ ಬಿತ್ತಿ ಅವುಗಳನ್ನು ಪೂರ್ಣಗೊಳಿಸಲು ಮೋದಿ ಸರ್ಕಾರ ವಿಫಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ನಾವೆಲ್ಲ ಕೇಂದ್ರ ಸರ್ಕಾರದ ಕೆಲಸ ನೋಡಿದ್ದೇವೆ. 2014ರಲ್ಲಿ ಬಿಜೆಪಿ ಪ್ರಚಾರ ವೇಳೆ ದೇಶ ಬದಲಾವಣೆ ಹಾಗೂ ರೈತರ ಆದಾಯ ದ್ವಿಗಣ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈವರೆಗೂ ರೈತರ ಆದಾಯ ದ್ವಿಗುಣವಾಗಿಲ್ಲ. ನದಿ ಜೋಡಣೆ ಕಾರ್ಯ ಆಗುತ್ತೆ, ಇಡೀ ದೇಶದಲ್ಲಿ ಬುಲೆಟ್ ಟ್ರೇನ್ ಓಡಿಸುತ್ತೇವೆ. ರೂಪಾಯಿ ಎದುರು ಡಾಲರ್ ದರ ₹ 10 ಮಾಡುತ್ತೇವೆ ಎಂದು ಬಿಜೆಪಿಯವರ ಹೇಳಿದ್ದರು. ಆದರೆ ಈವರೆಗೂ ಬಿಜೆಪಿ ಸರ್ಕಾರ ಯಾವುದೇ ಕಾರ್ಯ ಮಾಡಿಲ್ಲ. ದೇಶದಲ್ಲಿ ಅದಾಯ ಡಬಲ್ ಆಗಿದ್ದರೆ ಅದು ಅದಾನಿ ಹಾಗೂ ಅಂಬಾನಿಯದ್ದು ಮಾತ್ರ ಎಂದು ಆರೋಪಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಚಿಕ್ಕೋಡಿ ಜಿಲ್ಲಾ ಮಾಧ್ಯಮ ವಕ್ತಾರ ರಾವಸಾಹೇವ ಐಹೊಳಿ, ಮುಖಂಡರಾದ ಪ್ರವೀಣ ಗಾಣಿಗೇರ ರಮೇಶ ಸಿಂದಗಿ. ವಿನಾಯಕ ಬಾಗಡಿ. ಅರುಣ ಗಾಣಿಗೇರ. ಸಂಜಯ ಕುಚನೂರೆ. ಸಂಜಯ ಬಿರಡಿ. ರಫೀಕ್ ಪಟೇಲ್. ಬಾಹುಬಲಿ ಕುಸನಾಳೆ. ರಾಜು ಮದನೆ ಸೇರಿದಂತೆ ಅನೇಕರು ಇದ್ದರು.