ಜಿಲ್ಲೆಯ ಸಮಸ್ಯೆ ಬಗ್ಗೆ ಮಾತನಾಡದ ಪ್ರಧಾನಿ ಮೋದಿ: ಶಾಸಕ ಭೀಮಣ್ಣ ನಾಯ್ಕ

| Published : May 01 2024, 01:22 AM IST

ಜಿಲ್ಲೆಯ ಸಮಸ್ಯೆ ಬಗ್ಗೆ ಮಾತನಾಡದ ಪ್ರಧಾನಿ ಮೋದಿ: ಶಾಸಕ ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಬಾರದು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ನಾನೂ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಶಿರಸಿ: ನಮ್ಮ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನೂ ಮಾತಾಡಿಲ್ಲ. ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂಬ ನಿರೀಕ್ಷೆ ನಮಗೆ ಇತ್ತು. ಆ ನಿರೀಕ್ಷೆಗಳೆಲ್ಲ ಹುಸಿಯಾಗಿದೆ ಎಂದು ಬಿಜೆಪಿ ವಿರುದ್ಧ ಶಾಸಕ ಭೀಮಣ್ಣ ನಾಯ್ಕ ವಾಗ್ದಾಳಿ ನಡೆಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೂಂಡಾಗಿರಿ ಬರುತ್ತದೆ ಎಂದು ಹೇಳಿದ್ದಾರೆ. ಹೊನ್ನಾವರ ಯುವಕ ಪರೇಶ ಮೇಸ್ತ ಶವದ ಮುಂದೆ ರಾಜಕೀಯ ಮಾಡಿದವರು ಬಿಜೆಪಿಗರು. ಅದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಯುವಕರ ಮೇಲೆ ಪ್ರಕರಣ ದಾಖಲಾಯಿತು. ಆಗ ಓಡಿ ಹೋದವರು ಹಿಂದಿನ ಶಾಸಕರು. ಪ್ರಧಾನಮಂತ್ರಿ ಯಾಕೆ ಈ ವಿಷಯವನ್ನು ಕೇಳಿಲ್ಲ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದ್ದು, ಪ್ರಧಾನಮಂತ್ರಿ ಶಿರಸಿಗೆ ಆಗಮಿಸಿರುವುದು ವೈಯಕ್ತಿಕವಾಗಿ ಸ್ವಾಗತಿಸಿದ್ದೇನೆ. ಆದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಮಾತನಾಡುತ್ತಾರೆ ಎಂಬ ನಂಬಿಕೆ ಇತ್ತು. ಜಿಲ್ಲೆಯ ಅಭಿವೃದ್ಧಿ, ಅರಣ್ಯ ಅತಿಕ್ರಮಣ, ವಿದ್ಯಾವಂತರ ಉದ್ಯೋಗದ ಸಮಸ್ಯೆ ಬಗೆಹರಿಸುತ್ತೇನೆ ಎಂಬ ಮಾತನ್ನು ಹೇಳಿಲ್ಲ. ಅನೇಕ ವರ್ಷಗಳ ಅತಿಕ್ರಮಣವನ್ನು ಸಕ್ರಮ ಮಾಡಬೇಕು ಎಂಬುದನ್ನು ಮನಮೋಹನ ಸಿಂಗ್ ನೇತೃತ್ವದ ನಮ್ಮ ಸರ್ಕಾರ ಇದ್ದಾಗ ಕಾನೂನು ಜಾರಿಗೊಳಿಸಲಾಗಿತ್ತು. ನಂತರ ಸರ್ಕಾರ ಬದಲಾಯಿತು. ೧೦ ವರ್ಷಗಳಾದರೂ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಎಂದು ಆರೋಪಿಸಿದರು.ಕಸ್ತೂರಿ ರಂಗನ್ ವರದಿ ನಮ್ಮ ರಾಜ್ಯದ ೧೦ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ. ಶಿರಸಿ- ಸಿದ್ದಾಪುರ ರೈತರಿಗೆ ಬಹಳಷ್ಟು ಸಮಸ್ಯೆಯಾಗಲಿದೆ. ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಬಾರದು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ನಾನೂ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ದೇಶದಲ್ಲಿ ಅಷ್ಟೊಂದು ಅತ್ಯಾಚಾರ, ಅನಾಚಾರ ಆದರೂ ಮೋದಿ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವುದು ಎಲ್ಲರಿಗೂ ಸಂತೋಷ. ಆದರೆ ಬಿಜೆಪಿಗರು ರಾಮಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ಶೈಲೇಶ ಗಾಂಧಿ, ಸುಮಾ ಉಗ್ರಾಣಕರ ಸೇರಿದಂತೆ ಮತ್ತಿತರರು ಇದ್ದರು.