ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ದೇಶ ಆರ್ಥಿಕತೆ ಹಿತ ದೃಷ್ಟಿಯಿಂದ ಸಲಹೆ ನೀಡಿದ್ದನ್ನು ವ್ಯಂಗವಾಡಿರುವ ಸಂಸದ ರಾಜಶೇಖರ ಹಿಟ್ನಾಳ್ ಹೇಳಿಕೆ ಅಸಮಂಜಸ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ಅಪತ್ಕಾಲ್‌ ಎನ್ನುವುದು ದೇಶಕ್ಕೆ ಅನಿಶ್ಚಿತವಾಗಿ ಬರುವುದು. ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆದಿರುವ ಕಾರಣ ಜಗತ್ತಿನಾದ್ಯಂತ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ ದೇಶದ ಜನರನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇಂತಹ ಪರಿಸ್ಥಿತಿ ಎದುರಿಸಲು ಜನರಿಗೆ ಸಲಹೆ ನೀಡಿದ್ದಾರೆ.ದೇಶ ಯಾವಾಗ ಸಂಕಷ್ಟ ಎದುರಿಸಿದೆಯೋ ಅವಾಗ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ದೇಶದ ಜನ ಅದನ್ನು ಪಾಲಿಸಿದ್ದಾರೆ.ಹಾಗಾಗಿಯೇ ಕೊರೋನಾ ಮಹಾಮಾರಿ ನಮ್ಮ ದೇಶದಲ್ಲಿ ಎದುರಿಸಲು ಸಾಧ್ಯವಾಯಿತು.

ಈ ದೇಶದ ಜನ ನರೇಂದ್ರ ಮೋದಿ ಮೇಲೆ ವಿಶ್ವಾಸವಿಟ್ಟು 3ನೇ ಬಾರಿ ಅವಕಾಶ ಕೊಟ್ಟಿದ್ದಾರೆ. ಹಾಗಾಗಿ ಅವರು ಏನೆ ಸಲಹೆ ಸೂಚನೆ ನೀಡಿದರು.ಅದು ದೇಶದ ಹಿತ ದೃಷ್ಟಿಯಿಂದ ಎಂದು ಸಂಸದ ಹಿಟ್ನಾಳ ಅರಿಯಬೇಕು. ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗಳಿಗೆ ಜನ ಮನ್ನಣೆ ನೀಡುತ್ತಿದಾರೆ. ಹಿಂದೆ ಸ್ಥಿತಿವಂತರು ಎಲ್.ಪಿ.ಜಿ ಸಬ್ಸಿಡಿ ತ್ಯಜಿಸಿ ಎನ್ನುವ ಕರೆ ಕೊಟ್ಟಾಗ 1 ಕೋಟಿ ಜನ ಸಬ್ಸಿಡಿ ತ್ಯಜಿಸಿದರು. ಅದು ದೇಶಕ್ಕೆ ಆರ್ಥಿಕ ಬಲ ನೀಡಿತು.ಇಂತಹ ಅನೇಕ ಉದಾಹರಣೆ ಇದ್ದು. ಮಧ್ಯಪ್ರಾಚ್ಯದ ಯುದ್ಧದಿಂದ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ. ಇದು ನಮ್ಮ ಆಮದು ಬಿಲ್ ಅನ್ನು ಹೆಚ್ಚಿಸುತ್ತಿದೆ.ಪ್ರತಿ ಭಾರತೀಯನ ಸಣ್ಣ ಉಳಿತಾಯವು ದೇಶದ ಆರ್ಥಿಕತೆ ದೊಡ್ಡ ಸಂಕಷ್ಟದಿಂದ ಪಾರು ಮಾಡಬಲ್ಲದು.ಈ ಅಷ್ಟ ಸೂತ್ರಗಳು ಸರ್ಕಾರಿ ಆದೇಶಗಳಲ್ಲ. ಬದಲಿಗೆ ಬದಲಾಗುತ್ತಿರುವ ಜಾಗತಿಕ ಭೂಪಟದಲ್ಲಿ ಭಾರತವನ್ನು ಸುರಕ್ಷಿತವಾಗಿರಿಸಲು ಪ್ರತಿಯೊಬ್ಬ ಪ್ರಜೆಯೂ ನಿಭಾಯಿಸಬೇಕಾದ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ನವರಿಗೆ ಯಾವಾಗಲು ಮೋದಿ ಬೈದರೆ ದೊಡ್ಡವರಾಗಿಬಿಡ್ತೇವೆ ಎನ್ನುವ ಹುಚ್ಚು ಭ್ರಮೆಯಲ್ಲಿದ್ದು, ಇದರಿಂದ ಹಲವು ಬಾರಿ ಇಂತಹ ಬೇಜವಾಬ್ದಾರಿ ಹೇಳಿಕೆ ಸಂಸದ ರಾಜಶೇಖರ ಹಿಟ್ನಾಳ ಸಹ ನೀಡುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಂಸದ ಹಿಟ್ನಾಳ ದೇಶ ಆರ್ಥಿಕ ಸ್ಥಿತಿಯ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.