ಈ ಚುನಾವಣೆ ಶಕ್ತಿ ಸಂಹಾರಕ, ಆರಾಧಕರ ನಡುವಿನ ಯುದ್ಧ: ಮೋದಿ

| Published : Mar 19 2024, 01:46 AM IST / Updated: Mar 19 2024, 07:42 AM IST

PM Modi
ಈ ಚುನಾವಣೆ ಶಕ್ತಿ ಸಂಹಾರಕ, ಆರಾಧಕರ ನಡುವಿನ ಯುದ್ಧ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯನ್ನು ಟೀಕಿಸುವ ಭರದಲ್ಲಿ ‘ನಮ್ಮ ಹೋರಾಟ ಶಕ್ತಿಯ (ಸರ್ಕಾರದ ಬಲಪ್ರಯೋಗ) ವಿರುದ್ಧ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೀಡಿದ ಹೇಳಿಕೆ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

ಶಿವಮೊಗ್ಗ/ಮುಂಬೈ/ಹೈದರಾಬಾದ್‌

ಬಿಜೆಪಿಯನ್ನು ಟೀಕಿಸುವ ಭರದಲ್ಲಿ ‘ನಮ್ಮ ಹೋರಾಟ ಶಕ್ತಿಯ (ಸರ್ಕಾರದ ಬಲಪ್ರಯೋಗ) ವಿರುದ್ಧ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೀಡಿದ ಹೇಳಿಕೆ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂದರೆ ದುರ್ಗಾಮಾತೆ ಅಥವಾ ದೇವತೆ ಎಂದರ್ಥ. ಹೀಗಾಗಿ ರಾಹುಲ್‌ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಮೋದಿ, ‘ಅವರು ಹಿಂದೂ ಧರ್ಮದ ಶಕ್ತಿಯನ್ನು ಹೊಸಕಿಹಾಕಲು ಯತ್ನಿಸುತ್ತಿದ್ದಾರೆ. ಈ ಚುನಾವಣೆ ಶಕ್ತಿಯ ಸಂಹಾರಕರು ಹಾಗೂ ಶಕ್ತಿಯ ಆರಾಧಕರ ನಡುವಿನ ಯುದ್ಧವಾಗಲಿದೆ‘ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಭಾನುವಾರ ರಾತ್ರಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಸಮಾರೋಪದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಹಿಂದೂ ಧರ್ಮದಲ್ಲಿ ‘ಶಕ್ತಿ’ (ಶಕ್ತಿ) ಎಂಬ ಪದವಿದೆ. 

ನಾವು ‘ಶಕ್ತಿ’ (ಸರ್ಕಾರದ ಬಲ) ವಿರುದ್ಧ ಹೋರಾಡುತ್ತಿದ್ದೇವೆ. ಇಲ್ಲಿ ‘ಶಕ್ತಿ’ ಎಂದರೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ರಾಜನ (ಮೋದಿಗಾಗಿ) ಉದ್ಧಾರಕ್ಕಾಗಿ ಇವಿಎಂಗಳನ್ನು ತಿರುಚಲಾಗುತ್ತಿದೆ. 

ಇದು ವಾಸ್ತವ. ಕೇವಲ ಇವಿಎಂಗಳಷ್ಟೇ ಅಲ್ಲ, ದೇಶದ ಪ್ರತಿಯೊಂದು ಸ್ವತಂತ್ರ ಸಂಸ್ಥೆ, ಇ.ಡಿ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಗಳೂ ತಮ್ಮ ಸ್ವಂತಿಕೆಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿಬಿಟ್ಟಿವೆ. ಈ ರೀತಿ ಸ್ವಾಯತ್ತ ಸಂಸ್ಥೆಗಳ ಮೇಲೆ ‘ಶಕ್ತಿ’ಯ ಪ್ರಯೋಗ ನಡೆಯುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದರು.

ಶಿವಮೊಗ್ಗ ಹಾಗೂ ತೆಲಂಗಾಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ರಾಹುಲ್‌ ಅವರ ಈ ‘ಶಕ್ತಿ’ ಹೇಳಿಕೆ ಮುಂದಿಟ್ಟುಕೊಂಡು ಹರಿಹಾಯ್ದ ಮೋದಿ, ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅವರು (ರಾಹುಲ್‌) ತಮ್ಮ ಹೋರಾಟ ‘ಶಕ್ತಿ’ಯ ವಿರುದ್ಧ ಎಂದು ಹೇಳಿದ್ದಾರೆ. 

ಹಿಂದೂ ಧರ್ಮದ ಶಕ್ತಿಯನ್ನು ಮುಗಿಸುವ ಘೋಷಣೆ ಮಾಡಿದ್ದಾರೆ. ಅವರು ಶಕ್ತಿಯನ್ನು ಮುಗಿಸುತ್ತಾರೆಂದರೆ ಅದು ಶಕ್ತಿಯ ವಿನಾಶದ ಕರೆ. ಅವರಿಗೆ ಭಾರತ ಮಾತೆಯ ಶಕ್ತಿ ಕಣ್ಣು ಕುಕ್ಕುತ್ತಿದೆ. 

ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬ ತಾಯಿ, ಪ್ರತಿ ಹೆಣ್ಣು ಮಗಳೂ ‘ಶಕ್ತಿ’ಯ ರೂಪ. ತಾಯಂದಿರು ಮತ್ತು ಸಹೋದರಿಯರೇ, ನಾನು ನಿಮ್ಮನ್ನು ‘ಶಕ್ತಿ’ ಎಂದು ಆರಾಧಿಸುತ್ತೇನೆ, ನಾನು ಭಾರತ ಮಾತೆಯ ಆರಾಧಕ ಎಂದರು.

ಪ್ರಾಣ ತ್ಯಾಗಕ್ಕೂ ಸಿದ್ಧ: ‘ಇಂಡಿಯಾ ಮೈತ್ರಿಕೂಟ ತನ್ನ ಪ್ರಣಾಳಿಕೆಯಲ್ಲಿ ‘ಶಕ್ತಿ’ಯನ್ನು ಮುಗಿಸುತ್ತೇವೆ ಎಂದು ಘೋಷಿಸಿದೆ. ಅವರ ಸವಾಲನ್ನು ನಾನು ಸ್ವೀಕರಿಸುತ್ತೇನೆ. 

ತಾಯಂದಿರು ಮತ್ತು ಸಹೋದರಿಯರ ಸುರಕ್ಷತೆಗಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲೂ ಸಿದ್ಧ. ಈ ಚುನಾವಣೆ ಶಕ್ತಿ ಸಂಹಾರಕರು ಹಾಗೂ ಶಕ್ತಿಯ ಆರಾಧಕರ ನಡುವಿನ ಚುನಾವಣೆ ಆಗಿದೆ’ ಎಂದು ಗುಡುಗಿದರು.

ಠಾಕ್ರೆ ಆತ್ಮಕ್ಕೆ ಎಷ್ಟು ನೋವಾಗಿರಬೇಡ: ಶಿವಾಜಿ ಪಾರ್ಕ್‌ನಲ್ಲಿ ಇವರು ಆಡಿದ ಮಾತು ಕೇಳಿಸಿಕೊಂಡ ಶಕ್ತಿ ಆರಾಧಕರಾದ ಬಾಳಾ ಸಾಹೇಬ್ ಠಾಕ್ರೆ ಆತ್ಮಕ್ಕೆ ಎಷ್ಟು ದುಃಖವಾಗಿರಬೇಡ ಎಂದು ಪ್ರಶ್ನಿಸಿದ ಮೋದಿ, ಅಲ್ಲಿನ ಪ್ರತಿ ಮಗು ಕೂಡ ಜೈ ಶಿವಾಜಿ, ಜೈ ಭವಾನಿ ಎನ್ನುತ್ತದೆ. 

ಅದನ್ನು ಸಹಿಸಲು ಈ ಕೂಟಕ್ಕೆ ಸಾಧ್ಯವಾಗುತ್ತಿಲ್ಲ. ಶಿವಾಜಿ ಮಹಾರಾಜರು ತುಳಜಾ ಭವಾನಿ ಅವರ ಆಶೀರ್ವಾದ ಪಡೆದು ಸ್ವಾತಂತ್ರ್ಯ ಹೋರಾಟಕ್ಕಿಳಿದವರು. 

ಶಿವಾಜಿ ಮಹಾರಾಜರು ಶಕ್ತಿಯ ಆರಾಧಕರು. ಇದೀಗ ಐಎನ್‌ಡಿಎ ಒಕ್ಕೂಟ ಅದೇ ಶಿವಾಜಿ ಪಾರ್ಕ್‌ನಲ್ಲಿ ಶಕ್ತಿಯನ್ನು ನಾಶ ಮಾಡುವುದಾಗಿ ಘೋಷಿಸಿದೆ ಎಂದು ಕಿಡಿಕಾರಿದರು.

ಶಿವಮೊಗ್ಗದ ಸಮಾವೇಶದಲ್ಲಿ ಸಿಗಂದೂರೇಶ್ವರಿಗೆ ಪ್ರಣಾಮಗಳು ಎಂದು ಭಾಷಣದಲ್ಲಿ ಉಲ್ಲೇಖಿಸುತ್ತಲೇ, ಕಾಂಗ್ರೆಸ್‌ ಮೈತ್ರಿಕೂಟಕ್ಕೆ ನಾರಿ ಶಕ್ತಿಯನ್ನು ಸಹಿಸಲಾಗಲಿ, ಅರಗಿಸಿಕೊಳ್ಳಲಾಗಲೀ ಆಗುತ್ತಿಲ್ಲ. 

ಮೈತ್ರಿಕೂಟದವರು ಈ ಶಕ್ತಿಯನ್ನು ಹೊಸಕಿ ಹಾಕಲು ಹವಣಿಸುತ್ತಿದ್ದಾರೆ. ಅವರಿಗೆ ಒಬ್ಬ ಅಕ್ಕ, ಒಬ್ಬ ತಾಯಿ, ಒಬ್ಬ ತಂಗಿ ಸೇರಿ ಎಲ್ಲ ಹೆಣ್ಣು ಮಕ್ಕಳು ಉತ್ತರ ನೀಡುತ್ತಾರೆ. ಶಕ್ತಿಯ ಕುರಿತು ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಜೂ.೪ರಂದು ಉತ್ತರ ಸಿಗುತ್ತದೆ ಎಂದು ಮೋದಿ ಹೇಳಿದರು.

ನಾರಿಶಕ್ತಿ ಮೋದಿಯ ನಿಶ್ಯಬ್ದ ಮತಗಳು. ಅವರು ಮಹಿಳೆಯರಲ್ಲ, ದೇವತಾ ಶಕ್ತಿಯ ಸ್ವರೂಪಿಗಳು. ಅವರು ಸುರಕ್ಷತೆಯ ಕೋಟೆ ನಿರ್ಮಿಸಿದ್ದಾರೆ. ಹೀಗಾಗಿ ನಮ್ಮ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ. ಚಂದ್ರಯಾನ ನೌಕೆ ಇಳಿದ ಸ್ಥಳಕ್ಕೂ ಶಿವಶಕ್ತಿ ಪಾಯಿಂಟ್ ಎಂದು ಹೆಸರಿದ್ದೇವೆ.

ಅದೇ ಭಾವನೆಯೊಂದಿಗೆ ನಾವು ಭಾರತ ಮಾತೆಯನ್ನೂ ಪೂಜಿಸುತ್ತೇವೆ. ರಾಷ್ಟ್ರಕವಿ ತಮ್ಮ ಕಾವ್ಯದಲ್ಲೂ ಸ್ತ್ರೀಯರನ್ನು ಮಂತ್ರ ಕಣ, ತಾಯಿ ಕಣ, ಶಕ್ತಿ ಕಣ ಎಂದು ಬಣ್ಣಿಸಿದ್ದಾರೆ ಎಂದರು.