ರ್‍ಯಾಲಿ ಪ್ರಚಾರಕ್ಕೆ ಇಂದು ಖರ್ಗೆ ತವರಿಂದ ಮೋದಿ ಶಂಖ

| Published : Mar 16 2024, 01:55 AM IST / Updated: Mar 16 2024, 12:20 PM IST

Narendra Modi

ಸಾರಾಂಶ

2019ರಲ್ಲೂ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದ ನಮೋ ಈ ಬಾರಿಯೂ ದಕ್ಷಿಣ ಭಾರತದಲ್ಲಿ ಪ್ರಚಾರವನ್ನು ಆರಂಭಿಸಲು ಕಲಬುರಗಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸ ನಿಗದಿಯಾಗಿದೆ. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂರು, ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಶನಿವಾರ ಅವರು ಮಿನಿ ರೋಡ್‌ ಶೋ ನಡೆಸಲಿದ್ದಾರೆ. 

ಬಳಿಕ, ನಗರದ ಎನ್‌ವಿ ಮೈದಾನದಲ್ಲಿ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಲೋಕಸಭಾ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ಕಲ್ಯಾಣ ನಾಡಿನ ಕಲಬುರಗಿ, ಬೀದರ್‌, ರಾಯಚೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಸಂಸದರು, ಶಾಸಕರು, ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

2019ರಲ್ಲಿ ಲೋಕಸಭಾ ಚುನಾವಣೆಯ ಘೋಷಣೆಗೂ ಮುನ್ನ ಮೋದಿಯವರು ಇದೇ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶ ನಡೆಸಿದ್ದರು. 

ಅಂದು ಕಾಂಗ್ರೆಸ್‌ನಿಂದ ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಡಾ. ಉಮೇಶ ಜಾಧವ್‌ ಅವರು ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 

ಬಳಿಕ, ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿಯೂ ಬಿಜೆಪಿ, ಜಾಧವ್‌ಗೆ ಕಲಬುರಗಿಯಿಂದ ಟಿಕೆಟ್‌ ಘೋಷಣೆ ಮಾಡಿದೆ.ಮಿನಿ ರೋಡ್‌ ಶೋ:

ಮಧ್ಯಾಹ್ನ 2ಕ್ಕೆ ವಿಶೇಷ ವಿಮಾನದಲ್ಲಿ ಕಲಬುರಗಿಯ ಶ್ರೀನಿವಾಸ ಸರಡಗಿ ಏರ್‌ಪೋರ್ಟ್‌ಗೆ ಆಗಮಿಸುವ ಮೋದಿ, ಅಲ್ಲಿಂದ ವಾಯುಸೇನೆಯ ವಿಶೇಷ ಹೆಲಿಕಾಪ್ಟರ್‌ ಮೂಲಕ ನಗರದಲ್ಲಿರುವ ಪೊಲೀಸ್‌ ಪೆರೇಡ್‌ ಮೈದಾನಕ್ಕೆ ತೆರಳಲಿದ್ದಾರೆ. 

ಬಳಿಕ, ಇಲ್ಲಿಂದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಮಾವೇಶ ನಡೆಯಲಿರುವ ಎನ್‌ವಿ ಮೈದಾನದವರೆಗೆ ಸುಮಾರು 1 ಕಿ.ಮೀ. ದೂರ ರೋಡ್‌ ಶೋ ನಡೆಸಲಿದ್ದಾರೆ.

ಬಳಿಕ, ಎನ್‌ವಿ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ಕಲ್ಯಾಣ ನಾಡಿನ ಕಲಬುರಗಿ, ಬೀದರ್‌, ರಾಯಚೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಸಂಸದರು, ಶಾಸಕರು, ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮಕ್ಕೆ 2 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು, ಎನ್‌ವಿ ಮೈದಾನದಲ್ಲಿ 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. 

ಪಕ್ಕದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿಯೂ ಆಸನದ ವ್ಯವಸ್ಥೆ ಮಾಡಲಾಗಿದ್ದು, ದೊಡ್ಡ ಸ್ಕ್ರೀನ್‌ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 

ಮೋದಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.