ಸಾರಾಂಶ
ಬೆಂಗಳೂರು : ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿ ಸಬಲೀಕರಣವನ್ನು ಉತ್ತಮ ರೀತಿಯಲ್ಲಿ ಮಾಡಿರುವ ಬಿಬಿಎಂಪಿಗೆ ‘ಮೆಗಾ ಮತ್ತು ಮಿಲಿಯನ್ ಪ್ಲಸ್ ನಗರಗಳಡಿ’ ದೇಶದಲ್ಲೇ ಎರಡನೇ ರ‍್ಯಾಂಕ್ ಗಳಿಸಿದೆ.
ದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಈ ಪ್ರಶಸ್ತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ತೋಹಾನ್ ಸಾಹು, ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಪಿಎಂ ಸ್ವನಿಧಿಯ ಸಮುದಾಯ ಸಂಘಟಕ ಜನಾರ್ಧನ ಚಾರ್ ಉಪಸ್ಥಿತರಿದ್ದರು.
ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ವತಿಯಿಂದ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಬಿಬಿಎಂಪಿ ವ್ಯಾಪ್ತಿಯ 1.64 ಲಕ್ಷಕ್ಕೂ ಹೆಚ್ಚು ಮಂದಿ ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 2,04,173 ಬೀದಿ ವ್ಯಾಪಾರಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, 1,64,276 ಮಂದಿಗೆ ಕಿರು ಸಾಲ ಅನುಮೋದನೆ ಆಗಿದೆ. ಈ ಪೈಕಿ 1,28,844 ಮಂದಿ ಸಾಲ ಪಡೆದುಕೊಂಡಿದ್ದಾರೆ. ಒಟ್ಟಾರೆ ₹184.36 ಕೋಟಿ ಸಾಲ ವಿವರಣೆ ಮಾಡಲಾಗಿದೆ.
ಪ್ರಥಮ ರ್‍ಯಾಂಕ್ ಅನ್ನು ದೆಹಲಿ ಮಹಾನಗರ ಪಾಲಿಕೆ ಪಡೆದಿದೆ. ಎರಡನೇ ರ್‍ಯಾಂಕ್ ಅನ್ನು ಬಿಬಿಎಂಪಿ ಹಾಗೂ ಮೂರನೇ ರ್‍ಯಾಂಕ್ ಗುಜರಾತ್‌ನ ಅಹ್ಮದಾಬಾದ್ ಮಹಾನಗರ ಪಾಲಿಕೆ ಪಡೆದಿದೆ.