ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್‌!

| Published : Mar 16 2024, 01:45 AM IST / Updated: Mar 16 2024, 11:59 AM IST

Karnataka, CM Yeddyurappa, PM Modi

ಸಾರಾಂಶ

ತನ್ನ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಸಹಾಯ ಕೋರಿ ತಾಯಿ ಜತೆ ಮನೆಗೆ ಬಂದಿದ್ದ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಸಹಾಯ ಕೋರಿ ತಾಯಿ ಜತೆ ಮನೆಗೆ ಬಂದಿದ್ದ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರ ಬೆನ್ನಲ್ಲೇ, ಹೀಗೆ ಗಣ್ಯರ ವಿರುದ್ಧ ಸುಳ್ಳು ಆರೋಪ ಹೊರಿಸುವುದು ಈ ಸಂತ್ರಸ್ತೆ ತಾಯಿಯ ಚಾಳಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. 

ಈ ಹಿನ್ನಲೆಯಲ್ಲಿ ಪ್ರಕರಣವನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ತನಿಖೆಗೆ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಆದೇಶಿಸಿದ್ದಾರೆ. ಕೆಲ ದಿನಗಳ ಹಿಂದೆ ಯಡಿಯೂರಪ್ಪನವರ ನಿವಾಸದಲ್ಲಿ ಈ ಘಟನೆ ನಡೆದಿತ್ತು ಎಂದು ಆರೋಪಿಸಲಾಗಿದೆ. 

ಖಾಸಗಿ ಅಂಗ ಮುಟ್ಟಿದ ಬಿಎಸ್‌ವೈ: ಬೇಗೂರು ಬಳಿ ತಾಯಿ ಜತೆ ಸಂತ್ರಸ್ತೆ ನೆಲೆಸಿದ್ದು, ಹಲವು ದಿನಗಳ ಹಿಂದೆ ಆ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರ ತನಿಖೆ ಸೂಕ್ತ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೆರವು ಕೋರಲು ಅವರು ಮುಂದಾಗಿದ್ದರು. 

ಅಂತೆಯೇ ಫೆ.2ರಂದು ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಮನೆಗೆ ತಾಯಿ-ಮಗಳು ತೆರಳಿದ್ದರು. ಆಗ ಬಾಲಕಿ ಜತೆ ಅನುಚಿತವಾಗಿ ಯಡಿಯೂರಪ್ಪ ವರ್ತಿಸಿದ್ದಾರೆ ಎಂದು ದೂರಲಾಗಿದೆ. 

ನಮ್ಮ ಮಗಳ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಎಸ್‌ಐಟಿ ರಚಿಸುವಂತೆ ನ್ಯಾಯ ಕೋರಿ ಯಡಿಯೂರಪ್ಪನವರ ಮನೆಗೆ ತೆರಳಿದ್ದವು. ಆಗ ಅವರನ್ನು ನಾನು ಅಪ್ಪಾಜಿ ಎಂದು ಕರೆದರೆ, ಮಗಳು ತಾತಾ ಎನ್ನುತ್ತಿದ್ದಳು. ನಮ್ಮೊಂದಿಗೆ 9 ನಿಮಿಷ ಮಾತನಾಡಿದರು. 

ಆನಂತರ ನನ್ನ ಮಗಳ ಕೈ ಹಿಡಿದುಕೊಂಡ ಯಡಿಯೂರಪ್ಪ, ನಂತರ ಕೋಣೆಗೆ ಕರೆದೊಯ್ದು ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. 

ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸದಾಶಿವನಗರ ಠಾಣೆಗೆ ಸಂತ್ರಸ್ತೆ ತಾಯಿ ದೂರು ನೀಡಿದ್ದಾರೆ. ಅದರನ್ವಯ ಯಡಿಯೂರಪ್ಪ ವಿರುದ್ಧ ಪೊಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.ಉಪಕಾರ ಮಾಡಲು ಹೋದರೆ ಏನಾಗುತ್ತೆ ನೋಡಿ: ಬಿಎಸ್‌ವೈ

ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕಾನೂನು ರೀತಿ ಎದುರಿಸುತ್ತೇನೆ. ಉಪಕಾರ ಮಾಡಲು ಹೋದರೆ ಏನಾಗುತ್ತದೆ ಎಂಬುದಕ್ಕೆ ಇದು ನಿದರ್ಶನ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದೂವರೆ ತಿಂಗಳ ಹಿಂದೆ ತಾಯಿ ಮಗಳು ಕಣ್ಣೀರು ಹಾಕುವುದನ್ನು ನೋಡಿ ಒಳಗೆ ಕರೆಸಿ ಕೂರಿಸಿ ಸಮಸ್ಯೆ ಆಲಿಸಿದೆ. 

ಅನ್ಯಾಯ ಆಗಿದೆ ಎಂದು ನೋವು ತೋಡಿಕೊಂಡಿದ್ದರಿಂದ ಪೊಲೀಸ್ ಆಯುಕ್ತರಿಗೆ ಫೋನ್‌ ಮಾಡಿ ನ್ಯಾಯ ಒದಗಿಸುವಂತೆ ತಿಳಿಸಿದೆ. ಆ ಬಳಿಕ ಈ ಮಹಿಳೆ ಇದನ್ನ ಬೇರೆ ರೀತಿ ಮಾಡಿ ದೂರು ದಾಖಲಿಸಿದ್ದಾರೆ. 

ಕಷ್ಟ ಎಂದಿದ್ದಕ್ಕೆ ಸ್ವಲ್ಪ ಹಣ ಸಹ ಕೊಟ್ಟು ಕಳಿಹಿಸಿದೆ. ಆದರೂ ದೂರು ನೀಡಿದ್ದಾರೆ. ಪ್ರಕರಣವನ್ನು ಕಾನೂನು ರೀತಿ ಎದುರಿಸಲಾಗುವುದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ದೂರು ದಾಖಲಾಗಿರುವ ಹಿಂದೆ ರಾಜಕೀಯ ಪಿತೂರಿ ಇದೆ ಎನ್ನುವ ಆರೋಪವನ್ನು ಮಾಡುವುದಿಲ್ಲ ಎಂದು ಹೇಳಿದರು.

ಆರೋಪ ಸಾಬೀತಾದರೆ ಮಾತ್ರ ಮುಂದಿನ ಕ್ರಮ: ಸಚಿವ ಪರಂ

‘ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ನಮ್ಮ ಸರ್ಕಾರಕ್ಕೆ ಯಾವುದೇ ದುರುದ್ದೇಶ ಇಲ್ಲ. 

ಇದು ತುಂಬಾ ಸೂಕ್ಷ್ಮ ವಿಚಾರ. ಹೀಗಾಗಿ ತನಿಖೆಯಲ್ಲಿ ಮಹಿಳೆಯರ ದೂರಿನ ನೈಜತೆ ಪರಿಶೀಲಿಸಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಇದೇ ವೇಳೆ, ‘ಮಹಿಳೆಯು ಮಾನಸಿಕ ಅಸ್ವಸ್ಥತೆ ಹೊಂದಿರುವುದಾಗಿ ಕೆಲವರು ಹೇಳಿದ್ದಾರೆ. ಜತಗೆ ಯಡಿಯೂರಪ್ಪ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು. 

ಹೀಗಾಗಿ ದೂರಿನ ಉದ್ದೇಶವನ್ನು ಪರಿಶೀಲಿಸಬೇಕಿದೆ. ಉದ್ದೇಶ-ದುರುದ್ದೇಶಗಳ ಬಗ್ಗೆ ತನಿಖೆ ನಡೆಸಿದ ಬಳಿಕವೇ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯು ಕೈ ಬರಹದಲ್ಲಿ ದೂರು ನೀಡಿಲ್ಲ. ಬದಲಿಗೆ ಟೈಪ್‌ ಮಾಡಿರುವ ದೂರನ್ನು ತಂದು ನೀಡಿದ್ದಾರೆ. 

ಕಾನೂನು ಪ್ರಕಾರ ದೂರು ನೀಡಿದ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕು. ಬಳಿಕ ತನಿಖೆಯಿಂದ ಸತ್ಯಾಸತ್ಯತೆ ತಿಳಿಯಬೇಕು. ಈ ಬಗ್ಗೆ ತನಿಖೆಯಾಗಿ ಸಂಪೂರ್ಣ ಮಾಹಿತಿ ತಿಳಿದ ಬಳಿಕವೇ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ, ಅವರು ಮಾಜಿ ಮುಖ್ಯಮಂತ್ರಿಗಳು. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಏಕಾಏಕಿ ಆ ರೀತಿ ಮಾಡಲಾಗುವುದಿಲ್ಲ. ತನಿಖೆಯಾಗಿ ಆರೋಪ ಸಾಬೀತಾದರೆ ಮಾತ್ರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ದೂರುದಾರರಿಗೆ ರಕ್ಷಣೆ ನೀಡುತ್ತೀರಾ ಎಂಬ ಪ್ರಶ್ನೆಗೆ, ಪೊಲೀಸರು ದೂರುದಾರರ ರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಸಹಜವಾಗಿಯೇ ದೂರುದಾರರು ಅಥವಾ ಅವರ ಕುಟುಂಬ ಸದಸ್ಯರಿಗೆ ಯಾವುದಾದರೂ ತೊಂದರೆ ಇದೆಯೇ ಎಂದು ಪರಿಶೀಲಿಸುತ್ತಾರೆ. ಒಂದೊಮ್ಮೆ ಅಗತ್ಯವಾದರೆ ರಕ್ಷಣೆ ಒದಗಿಸುತ್ತಾರೆ ಎಂದಷ್ಟೇ ಹೇಳಿದರು.