ಸಾರಾಂಶ
ಕವಿತೆಗಳು ನಮ್ಮ ಮನಸ್ಸಿನ ಸಂತೋಷ, ದುಃಖದ ಕನ್ನಡಿಯಾಗಿದೆ. ಕವಿತೆಗಳು ಭಾವನೆಗಳ ಅಭಿವ್ಯಕ್ತಿಗೆ ದಾರಿಯಾಗಿದೆ.
ಲಕ್ಷ್ಮೇಶ್ವರ: ಸುಂದರ ಕವಿತೆಗಳು ಮನಸ್ಸಿನ ಭಾವನೆಗಳೇ ಆಗಿದೆ. ಭಾವನೆ, ವಿಡಂಬನೆ, ವಾಸ್ತವ ಮತ್ತು ಕಲ್ಪನೆಗಳ ಸಮ್ಮಿಲನವೇ ಕವಿತೆ ಹಾಗೂ ಕವಿತೆಯ ತಿರುಳು ಎಂದು ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.
ಪಟ್ಟಣದ ಮಹಾಕವಿ ಪಂಪ ವೃತ್ತದ ಸಮೀಪ ಇರುವ ಎಸ್.ಬಿ. ಮುಳ್ಳಳ್ಳಿ ಅವರು ನಿವಾಸದಲ್ಲಿ ಪಟ್ಟಣದ ನಮ್ಮ ನಿಮ್ಮ ವೇದಿಕೆಯ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ಕವಿತೆ-ಮಾತು ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕವಿತೆಗಳು ನಮ್ಮ ಮನಸ್ಸಿನ ಸಂತೋಷ, ದುಃಖದ ಕನ್ನಡಿಯಾಗಿದೆ. ಕವಿತೆಗಳು ಭಾವನೆಗಳ ಅಭಿವ್ಯಕ್ತಿಗೆ ದಾರಿಯಾಗಿದೆ. ಭಾವನೆಗಳಿಗೆ ಶಬ್ದಗಳ ಬಣ್ಣ ಹಚ್ಚಿ ಸುಂದರಗೊಳಿಸುವುದು ಕಾವ್ಯಕ್ಕೆ ಇರುವ ಶಕ್ತಿ. ಹೆಚ್ಚು ಅಧ್ಯಯನ ಕಾವ್ಯ ಕಟ್ಟಲು ಸಹಕಾರಿ ಎಂದು ಹೇಳಿದರು. ಬಳಿಕ ತಾವು ರಚಿಸಿದ ಸಾಮಾಜಿಕ ಕಳಕಳಿಯ ಕವಿತೆಗಳನ್ನು ವಾಚಿಸಿದರು.ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕವಿತೆಗಳು ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುವ ಕಲೆಯಾಗಿದೆ. ಭಾವನೆಗಳಿಗೆ ಶಬ್ದಗಳ ಬಲೆ ಹೆಣಿದು ಸುಂದರವಾಗಿ ಕಾಣುವಂತೆ ಮಾಡಿ ಗೇಯತೆಗೆ ತೊಡಗಿಸುವ ಕಾರ್ಯ ಅದ್ಭುತ ಎಂದು ಹೇಳಿದರು.
ಸುಮಾ ಚೋಟಗಲ್ಲ ಸ್ವರಚಿತ ಕವನ ವಾಚನ ಮಾಡಿದರು. ಎಸ್.ಬಿ. ಮುಳ್ಳಳ್ಳಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಸಿ.ಜಿ. ಹಿರೇಮಠ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಫಕ್ಕಿರೇಶ ಮ್ಯಾಟಣ್ಣವರ, ಬಸವರಾಜ ದೊಡ್ಡಮನಿ, ಎಸ್.ಎಫ್. ಕೊಡ್ಲಿ, ರಾಜು ಪಾಟೀಲ್, ಸುವರ್ಣ ನಂದಿಕೋಲಮಠ, ಪುರ್ಣಾಜಿ ಕರಾಟೆ ಇದ್ದರು.ಸಾಹಿತಿ ಡಾ. ಮಂಜುನಾಥ ಬೊಮ್ಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿರಾಜ ಶಿಗ್ಲಿ ಪ್ರಾರ್ಥನೆ ಸಲ್ಲಿಸಿದರು. ಬಸವರಾಜ ಬಾಳೇಶ್ವರಮಠ ಕಾರ್ಯಕ್ರಮ ನಿರ್ವಹಿಸಿದರು.