ಕವನಗಳು ಸಾಮರಸ್ಯ ಬದುಕನ್ನು ಕಟ್ಟಿಕೊಡಬೇಕು: ಮಂಜುನಾಥ್

| Published : Jan 16 2025, 12:45 AM IST

ಸಾರಾಂಶ

ಸಮಕಾಲೀನ ಸಮಸ್ಯೆಗಳಿಗೆ ಕವಿತೆಗಳು ಸ್ಪಂದಿಸಿದಾಗ ಆ ಕವಿತೆ ಸರ್ವರ ಮನಸ್ಸನ್ನು ಗೆಲ್ಲುತ್ತದೆ. ಆದ್ದರಿಂದ ಯುವ ಕವಿಗಳು ಹಿರಿಯ ಕವಿತೆ, ಲೇಖನಗಳನ್ನು ಓದಿ ಅಧ್ಯಯನ ಮಾಡಿ ಹೊಸ ಕವಿತೆಗಳನ್ನು ರಚಿಸಬೇಕು. ಮೊದಲು ಅಧ್ಯಯನಕ್ಕೆ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕವನಗಳು ಕೇವಲ ರೋಷಾವೇಶವಾಗಿರದೆ ಸಾಮರಸ್ಯ ಬದುಕನ್ನು ಕಟ್ಟಿಕೊಡುವ, ದಿಕ್ಕಿಲ್ಲದವರಿಗೆ ದಿಕ್ಕು ತೋರುವ ಆಶಯ ಹೊಂದಿರಬೇಕು ಎಂದು ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ನಡೆದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಮಾತನಾಡಿ, ಕವಿತೆಗಳು ನಮ್ಮ ಭಾವನೆಗಳ ಪ್ರತಿಬಿಂಬವಾಗಿದೆ. ತಾನು ಕಂಡಿದ್ದು, ಅನುಭವಿಸಿದ್ದ, ಆಸ್ವಾದಿಸಿದ್ದನ್ನು ಪದಗಳ ಮೂಲಕ ಕವಿಯಾದವನು ಕಟ್ಟಿ ಕೊಡುತ್ತಾನೆ ಎಂದರು.

ಸಮಕಾಲೀನ ಸಮಸ್ಯೆಗಳಿಗೆ ಕವಿತೆಗಳು ಸ್ಪಂದಿಸಿದಾಗ ಆ ಕವಿತೆ ಸರ್ವರ ಮನಸ್ಸನ್ನು ಗೆಲ್ಲುತ್ತದೆ. ಆದ್ದರಿಂದ ಯುವ ಕವಿಗಳು ಹಿರಿಯ ಕವಿತೆ, ಲೇಖನಗಳನ್ನು ಓದಿ ಅಧ್ಯಯನ ಮಾಡಿ ಹೊಸ ಕವಿತೆಗಳನ್ನು ರಚಿಸಬೇಕು. ಮೊದಲು ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಕಸಾಪ ಮಾಜಿ ಉಪಾಧ್ಯಕ್ಷ ಕೆ.ಕಾಳೇಗೌಡ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಹಾಲಿ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಕೆ.ಆರ್.ರಘು, ವಿನೋದ್‌ಸಿಂಗ್, ಎಚ್.ಆರ್. ಮೋಹನ್ ಕುಮಾರ್, ಜಯಲಕ್ಷ್ಮಿ ಶಿವಸ್ವಾಮಿ, ಕನ್ನಡ ನಾಗರಾಜು, ನಾರಾಯಣಸ್ವಾಮಿ, ಸವಿತಾ ರಮೇಶ್, ಕಟ್ಟೆ ಮಹೇಶ್, ದೇವರಾಜು, ಟಿ.ಜೆ.ವಿಮಲಾ, ಡಿ.ಎ.ಮಂಜುನಾಥ್ ಸೇರಿದಂತೆ ಹಲವು ಕವಿಗಳು ಕವಿತೆ ವಾಚಿಸಿದರು.

ವೇದಿಕೆಯಲ್ಲಿ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ದಿನೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ರಾಜೇನಹಳ್ಳಿ ಪದ್ಮೇಶ್, ಉಪನ್ಯಾಸಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಎಚ್.ಟಿ.ಗಿರೀಶ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ಪ್ರಗತಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಂ.ಕೆ.ಮೋನಿಕಾ, ಜಾನಪದ ಪರಿಷತ್ತಿನ ಕಾರ್ಯದರ್ಶಿ ಶೀಳನೆರೆ ಶಿವಕುಮಾರ್, ಎಸ್.ಮಂಜೇಗೌಡ, ಸಿ.ಟಿ.ಚನ್ನೇಗೌಡ, ಪಿ.ಬಿ.ನಾಗರಾಜು, ಧರ್ಮರಾಜು, ಅಶೋಕ್, ಕೆ.ಸಿ.ಪಾಪಯ್ಯ, ಶ್ರೀಕಾಂತ್ ಚಿಮ್ಮಲ್, ರವಿಶಿವಕುಮಾರ್, ರೇವಣ್ಣ, ಗೋಪಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

18ರಂದು ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಮಂಡ್ಯ:

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಜ.18ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜ ಆಶ್ರಯದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಉಪಸ್ಥಿತಿಯಲ್ಲಿ ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಕೆ.ವಿವೇಕಾನಂದ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ ಮಂಜು, ಕೆ.ಎಂ.ಉದಯ, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ, ಮುಡಾ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಶ್ಯಪ ಶಿಲ್ಪಕಲಾನಿಕೇತನದ ಮಾಲೀಕ ಅರುಣ್ ಯೋಗಿರಾಜ್ ಪಾಲ್ಗೊಳ್ಳುವರು. ಸಾಹಿತಿ ಕೆ.ಪಿ.ಸ್ವಾಮಿಯವರು ಉಪನ್ಯಾಸ ನೀಡಲಿದ್ದಾರೆ.