ಸಾರಾಂಶ
ಯುಗಾದಿ ಸಂಭ್ರಮ ಕವಿಗೋಷ್ಠಿ
ಕನ್ನಡಪ್ರಭ ವಾರ್ತೆ ಕಾರಟಗಿಒಂದು ಉತ್ತಮ, ಅದ್ಭುತ ಫೋಟೋ 500 ಶಬ್ದಗಳಿಗೆ ಸಮ. ಅದರಂತೆ ಇಡೀ ಜಗತ್ತನ್ನೂ ಅದ್ಭುತವಾಗಿ ಕಡಿಮೆ ಅಕ್ಷರಗಳಲ್ಲಿ ಚಿತ್ರಿಸಿ ವರ್ಣಿಸುವ ಸಾಮರ್ಥ್ಯ, ಶಕ್ತಿ ಇರುವುದು ಕನ್ನಡ ಕವಿತೆಗೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿ.ಬಿ. ಚಿಲ್ಕರಾಗಿ ಬಣ್ಣಿಸಿದರು.
ಇಲ್ಲಿನ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಕಸಾಪ ತಾಲೂಕು ಘಟಕದ ನೇತೃತ್ವದಲ್ಲಿ ಮಾತೋಶ್ರೀ ದಿ. ಭರಮಮ್ಮ ವೀರಪ್ಪ ಭಜಂತ್ರಿ ಹಾಗೂ ಮಾತೋಶ್ರೀ ದಿ. ಹನುಮಮ್ಮ ಲಕ್ಷ್ಮಪ್ಪ ಭಜಂತ್ರಿ ಇವರ ಸ್ಮರಣಾರ್ಥ ಆಯೋಜಿಸಲಾಗಿದ್ದ "ಯುಗಾದಿ ಸಂಭ್ರಮ " ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕವಿತೆಯು ಸಾಹಿತ್ಯ ಪ್ರಕಾರದಲ್ಲಿ ವಿಶಿಷ್ಠ ಸ್ಥಾನ ಮತ್ತು ಗೌರವ ಪಡೆದಿದೆ. ಸಾವಿರ ಪದಗಳಲ್ಲಿ ಹೇಳಬಹುದಾದ ಸಂಗತಿಯನ್ನು ಕೆಲವೇ ಪದಗಳಲ್ಲಿ ಅರ್ಥೈಸುವ ಸಾಮರ್ಥ್ಯ ಕವಿತೆಗೆ ಇದೆ.
ಆದಿಕವಿ ಪಂಪನ ಕಾಲದಿಂದ ಇಲ್ಲಿಯವರೆಗೂ ಕನ್ನಡ ಭಾಷೆ ಹಾಗೂ ಕಾವ್ಯ ಲೋಕಕ್ಕೆ ಸಾವಿರಾರು ಕವಿಗಳು ಕೊಡುಗೆ ನೀಡಿದ್ದಾರೆ. ಸಾಂಸ್ಕೃತಿಕ ವಲಯದ ಪರಿಧಿಯನ್ನು ವಿಸ್ತರಿಸಿ ಕನ್ನಡ ಭಾಷೆ ಮೆರೆಯಲು ಕಾರಣರಾಗಿದ್ದೂ ಅಲ್ಲದೇ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಸಾವಿರಾರು ಕವಿಗಳು ಆಗಿ ಹೋಗಿದ್ದರೇನು, ಸಾಹಿತ್ಯದೆಡೆಗಿನ ಮೋಹ ಕಡಿಮೆಯಾಗಿದೆಯೇ..? ನೀವು ಕೂಡಾ ಹಳೆಯ ವಸ್ತು ಇಟ್ಟುಕೊಂಡು ಹೊಸದನ್ನು ಸೃಷ್ಟಿಸುವ ತಾಕತ್ತನ್ನು ಬೆಳೆಸಿಕೊಳ್ಳಬಹುದು. ಭತ್ತದ ನಾಡಿನಲ್ಲಿ ಕನ್ನಡ ಸಾಹಿತ್ಯ ನಿಧಾನವಾಗಿ ಬೆಳೆಯುತ್ತಿದೆ. ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗಿದ್ದು ಸಂತೋಷದ ವಿಷಯ. ಕನ್ನಡ ಸಾಹಿತ್ಯ ಮತ್ತು ಕವನ ರಚನೆ ಈ ನೆಲದಲ್ಲಿ ಬತ್ತದಂಥೆ ನೀವು ಕೂಡಾ ಗಂಭೀರವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಿ. ನೀರು, ನೀರಾವರಿ, ರೈತ ಸಾಮಾಜಿಕ ಮತ್ತು ಮಾನವೀಯ ನೆಲೆಯಲ್ಲಿ ಆಸಕ್ತಿಯನ್ನು ವಿಸ್ತರಿಸಿ ಕವಿತೆ ಬರೆಯಬಹುದು. ಕವಿಯಾದವನಿಗೆ ವಿಶೇಷವಾದ ಗೌರವವನ್ನು ಸಮಾಜ ಕೊಡುತ್ತದೆ. ಹೀಗಾಗಿ ಭತ್ತ ಬೆಳೆಯುವ ಶ್ರೀಮಂತ ನೆಲದಲ್ಲಿ ಈ ಹೊಸ ಪೀಳಿಗೆ ಕನ್ನಡ ಸಾಹಿತ್ಯವನ್ನೂ ಶ್ರೀಮಂತಗೊಳಿಸಲಿ ಎಂದು ಕರೆ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲೀಸ್ ಪಾಟೀಲ್ ಕಾರ್ಯಕ್ರಮದ ಉದ್ಘಾಟಸಿದರು.
ವಿದ್ಯಾಸಂಸ್ಥೆಯ ಮುಖ್ಯೋಪಾದ್ಯಾಯ ವೀರೇಶ ಮ್ಯಾಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯ ಸಂಚಾಲಕ ಜಗದೀಶ್ ಭಜಂತ್ರಿ ಮಾತನಾಡಿದರು.ಗೋಷ್ಠಿಯಲ್ಲಿ ವಿವಿಧ ತಾಲೂಕುಗಳಿಂದ ೩೦ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ಯುಗಾದಿ ಹಬ್ಬದ ಕುರಿತು ಕವಿತೆ ವಾಚಿಸಿದರು. ಕವನ ವಾಚಿಸಿದ ಕವಿಗಳಿಗೆ ನೆನೆಪಿನ ಕಾಣಿಕೆ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ವೇಳೆ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಡಾ. ಸಿ.ಬಿ. ಚಿಲ್ಕರಾಗಿ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಚನ್ನಬಸಪ್ಪ ವಕ್ಕಳದ್ ಮತ್ತು ಮಲ್ಲಿಕಾರ್ಜುನ ಹಿಂದುಪುರ ಸೇರಿ ಇತರರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಜಿಲ್ಲಾ ಕೋಶಾಧ್ಯಕ್ಷ ರಮೇಶ್ ಕುಲಕರ್ಣಿ, ಬಸವರಾಜ್ ರ್‍ಯಾವಳದ್, ಹನುಮಂತಪ್ಪ ತೊಂಡಿಹಾಳ, ವಿಜಯಲಕ್ಷ್ಮೀ ಮೇಲಿನಮನಿ, ಮೆಹಬೂಬ್ ಕಿಲ್ಲೇದಾರ್, ಮುಖ್ಯಗುರುಗಳಾದ ಮಹಾಂತೇಶ ಗದ್ದಿ ಮತ್ತು ಅಮರೇಶ್ ಪಾಟೀಲ್, ನಾಗರಾಜ್ ಉಮಚಗಿ, ಹುಲ್ಲೇಶ್ ಬಿ., ವಿಜಯಕುಮಾರ್ ಇತರರು ಇದ್ದರು.
ಕಸಾಪ ಕಾರ್ಯದರ್ಶಿ ಮಂಜುನಾಥ ಚಿಕ್ಕೇನಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.