ಪ್ರಸ್ತುತ ಸಂದರ್ಭದಲ್ಲಿ ಹಲವಾರು ಯುವ ಕವಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಅವರಿಗೆ ಸೂಕ್ತ ವೇದಿಕೆಯನ್ನು ಒದಗಿಸಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವವರನ್ನು ಗೌರವಿಸುವ ಜೊತೆಗೆ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕಾಗಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಸ್ತುತ ಯುವ ತಲೆಮಾರಿನ ಕವಿಗಳು ಬರೆಯುತ್ತಿರುವ ಕಾವ್ಯ ಕಾಲಾತೀತವಾಗಿ, ದೇಶಾತೀತವಾಗಿ ವರ್ತಮಾನಕ್ಕೆ ಸ್ಪಂದಿಸುವಂತೆ ಇರಲಿ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಮಹದೇವ ಶಂಕನಪುರ ಸಲಹೆ ನೀಡಿದರು.ನಗರದ ರೋಟರಿ ಭವನದಲ್ಲಿ ಜೋಳಿಗೆ ಪ್ರಕಾಶನ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ದೀಪಾವಳಿ ಕವಿಗೋಷ್ಠಿ- 2026 ಹಾಗೂ ಕವಿ ಪ್ರಕಾಶ್ ಪುಟ್ಟಪ್ಪ ಅವರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಜಿಲ್ಲೆಯ ಹಲವಾರು ಕವಿಗಳು, ಕಥೆಗಾರರು ಹಲವಾರು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿದ್ದಾರೆ. ಇವತ್ತು ಕಥೆ ಮತ್ತು ಕಾವ್ಯವನ್ನು ಬರೆಯುವಂಥವರು ಯಾವ ಪಂಥಕ್ಕೆ ಸೇರುತ್ತಾರೆ ಎಂದು ನೋಡಿದರೇ, ನವ್ಯ, ನವೋದಯ, ದಲಿತ, ಬಂಡಾಯ ಎಲ್ಲವನ್ನೂ ದಾಟಿ ಹೊಸತಲೆಮಾರಿನ ಕವಿಗಳು ಬರೆಯುತ್ತಿದ್ದಾರೆ. ಕಾವ್ಯ ಯಾವುದೇ ತತ್ವ- ಸಿದ್ಧಾಂತಗಳಿಗೆ ಜೋತು ಬೀಳುವ ಅಗತ್ಯವಿಲ್ಲ. ಕವಿಯಾದವನು ಯಾವುದೇ ಜಾತಿ, ಮತ, ಪಂಥಗಳನ್ನು ಮೀರಿ ಕವಿತೆಯನ್ನು ಬರೆಯಬೇಕಾಗಿದೆ ಎಂದರು.ಜೋಳಿಗೆ ಪ್ರಕಾಶನದ ಪ್ರಕಾಶಕ ಮಂಜು ಕೋಡಿ ಉಗನೆ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹಲವಾರು ಯುವ ಕವಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಅವರಿಗೆ ಸೂಕ್ತ ವೇದಿಕೆಯನ್ನು ಒದಗಿಸಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವವರನ್ನು ಗೌರವಿಸುವ ಜೊತೆಗೆ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವಿ ಪ್ರಕಾಶ್ ಪುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹೊರೆಯಾಲ ದೊರೆಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ಕವಿ ಅನಿಲ್ ಕುಮಾರ್ ಹೊಸೂರು ಹಾಗೂ ಇತರರು ಹಾಜರಿದ್ದರು.ಗಮನಸೆಳೆದ ಕವಿಗೋಷ್ಠಿ:
ಜೋಳಿಗೆ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ದೀಪಾವಳಿ ಕವಿಗೋಷ್ಠಿ ಗಮನ ಸೆಳೆಯಿತು. ಕವಿಗಳಾದ ದಾಸನೂರು ಕೂಸಣ್ಣ, ಸೋಮಶೇಖರ ಬಿಸಲ್ವಾಡಿ, ಶೀಲಾ ಸತ್ಯೇಂದ್ರಸ್ವಾಮಿ, ಆಸಿಮ, ಬಸವಣ್ಣ ಮೂಕಳ್ಳಿ, ಡಾ.ಅಶ್ವಿನಿ ಕಸ್ಸಪ, ಶಿವು ಜನ್ನೂರು ಹೊಸೂರು ಅವರು ಸ್ವರಚಿತ ಕವನಗಳನ್ನು ವಾಚನ ಮಾಡುವ ಮೂಲಕ ಕಾವ್ಯಾಸಕ್ತರಿಂದ ಮೆಚ್ಚುಗೆ ಪಡೆದರು.-