ಕವಿ-ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಸಚಿವ ದರ್ಶನಾಪೂರ

| Published : Feb 01 2024, 02:05 AM IST

ಕವಿ-ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಸಚಿವ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಯಾದಗಿರಿ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಸಹಯೋಗದಲ್ಲಿ ನಡೆದ 5 ಪುಸ್ತಕಗಳ ಬಿಡುಗಡೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕವಿಗಳು, ಬರಹಗಾರರು, ಸಾಹಿತಿಗಳು ಜೊತೆಗೆ ಕಲಾವಿದರಿಗೆ ಪ್ರೋತ್ಸಾಹ ಮತ್ತು ಸಮರ್ಪಕ ವೇದಿಕೆಗಳು ಅಗತ್ಯ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಯಾದಗಿರಿ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಸಹಯೋಗದಲ್ಲಿ ನಡೆದ 5 ಪುಸ್ತಕಗಳ ಬಿಡುಗಡೆ, ವಿಶಿಷ್ಠ ಕಲಾಕೃತಿಗಳ ಪ್ರದರ್ಶನ, ಸಗರನಾಡು ಪುಸ್ತಕಾಲಯಕ್ಕೆ ಚಾಲನೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಬರಹಗಾರರ ಮೇಲೆ ಬಹುದೊಡ್ಡ ಜವಾಬ್ದಾರಿ ಮತ್ತಿ ನಿರೀಕ್ಷೆಗಳಿದ್ದು, ಬರಹಗಾರರು ಸಮಾಜಕ್ಕೆ ಸ್ಪಂದಿಸುವ ವರ್ತಮಾನಕ್ಕೆ ಧ್ವನಿಯಾಗುವ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಕಲಾವಿದರು ತಮ್ಮ ಕಲೆಯಲ್ಲಿಯೇ ಆತ್ಮತೃಪ್ತಿ ಕಾಣುತ್ತಾರೆ. ಇವರಿಗೆ ಪ್ರೋತ್ಸಾಹ, ಸಹಕಾರ, ವೇದಿಕೆಗಳ ಅವಕಾಶ ಅಗತ್ಯವಾಗಿದೆ. ಅಲ್ಲದೆ ಬರಹಗಾರರ ಬರಹಗಳಲ್ಲಿ ತಪ್ಪು ಹುಡುಕುವ ಸಂಖ್ಯೆ ನಮ್ಮ ಮಧ್ಯ ಹೆಚ್ಚಾಗಿದ್ದು, ಉದಯೋನ್ಮುಖರಿಗೆ ಮಾರ್ಗದರ್ಶನ, ಸಲಹೆನೀಡಿ ಬೆಳೆಸಬೇಕು ಎಂದರು.

ಜಿಲ್ಲೆಯ ತತ್ವಪದಕಾರರು, ಯಾದಗಿರಿ-ಕಲಬುರಗಿ ಜಿಲ್ಲೆಯ ವಿಮೋಚನೆ ಹೋರಾಟಗಾರರು, ಹೈದ್ರಾಬಾದ್ ವಿಮೋಚನಾ ಚಳುವಳಿ, ಮಾಸದ ಹೂ ಹೈಕು ಸಂಕಲನ, ನಿಜರೂಪ ಕವನ ಸಂಕಲನವನ್ನು ಸಚಿವರು ಬಿಡುಗಡೆ ಮಾಡಿದರು.

ಅರಳಿಮರದ ಎಲೆಗಳಮೇಲೆ ವಿಶಿಷ್ಟವಾದ ಚಿತ್ರಗಳನ್ನು ಬಿಡಿಸಿದ ಡಾ. ಮಲ್ಲಿಕಾರ್ಜುನ ಕಮತಗಿ ಅವರ ಚಿತ್ರ ಪ್ರದರ್ಶನಕ್ಕೆ ಯಾದಗಿರಿಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಚಾಲನೆ ನೀಡಿದರು. ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಡಾ. ಸುರೇಶ ಸಜ್ಜನ್ ಸಗರನಾಡು ಪ್ರಕಾಶನ ಲಾಂಛನ ಬಿಡುಗಡೆ ಮಾಡಿ ಪುಸ್ತಕ ಹಾಗೂ ಅಭಿಯಾನದಡಿ ಪುಸ್ತಕ ಕಿಟ್‌ಗಳನ್ನು ಖರೀದಿಸಿ ಚಾಲನೆ ನೀಡಿದರು.

ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರುಮುರುಗರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. 5 ಕೃತಿಗಳ ಕುರಿತು ಡಾ. ಸುಭಾಶ್ಚಂದ್ರ ಕೌಲಗಿ ಹಾಗೂ ಶರಣಗೌಡ ಜೈನಾಪೂರ ಮಾತನಾಡಿದರು.

ಡಾ. ಶರಣಬಸಪ್ಪ ವಡ್ಡನಕೇರಿ, ಗಿರೀಶಗೌಡ ಇನಾಮದಾರ, ಮಾಣಿಕರೆಡ್ಡಿ ಕುರುಕುಂದಿ, ಮಲ್ಲಿಕಾರ್ಜುನ ಶಿರಗೋಳ, ಶಿವು ಬಳಿಚಕ್ರ, ಶ್ರೀಕಾಂತ ವಿಶ್ವಕರ್ಮ ವೇದಿಕೆಯಲ್ಲಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಇತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಗೌರವಕ್ಕೆ ಭಾಜನರಾದ ಜಿಲ್ಲೆಯ ಭಾಗ್ಯವತಿ ಕೆಂಭಾವಿ, ಶಿವನಗೌಡ ಕುಪಗಲ್, ಮಂಜುನಾಥ ಶಹಾಪುರ, ಮಾಳಪ್ಪ ನಾಗರಾಳ, ಮಲ್ಲಪ್ಪ ಭಿಮರಾಯ ಸುರಪುರ ಇವರುಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಭೀಮರಾಯ ಲಿಂಗೇರಿ ನಿರೂಪಿಸಿದರು. ಶರಣಪ್ಪ ಗೋನಾಳ ರಾಯಚೂರು ಪ್ರಾರ್ಥಿಸಿದರು. ಡಾ. ಸಿದ್ದರಾಜ ರೆಡ್ಡಿ ಸ್ವಾಗತಿಸಿದರು. ಬಸವರಾಜ ಮೋಟ್ನಳ್ಳಿ ವಂದಿಸಿದರು. ಪ್ರಮುಖರಾದ ಅಯ್ಯಣ್ಣ ಹುಂಡೇಕಾರ, ಆರ್. ಮಹಾದೇವಪ್ಪ ಅಬ್ಬೆತುಮಕೂರು, ವೆಂಕಟೇಶ ಕಲಕಂಭ, ಶರಣಬಸಪ್ಪ ಯಾಳವಾರ, ಮಲ್ಲಿಕಾರ್ಜುನ ಕರಿಕಳ್ಳಿ, ಬಸರೆಡ್ಡಿ ಗುರುಮಠಕಲ್, ನಬಿಲಾಲ್ ಮಕಾಂದಾರ, ಕಮಲಾಕರ್ ಸುರಪುರ, ದೇವಿಂದ್ರಪ್ಪ ಧೋತ್ರೆ, ಶಿವಶರಣಪ್ಪ ಹೆಡಿಗಿನಾಳ, ದೇವರಾಜ ವರಕನಳ್ಳಿ, ಚನ್ನಪ್ಪ ಟಾಣಾಗುಂದಿ, ಮಲ್ಲು ಬಾದ್ಯಾಪೂರ ಸೇರಿದಂತೆ ಇತರರಿದ್ದರು.

ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ: ಹೊನ್ಕಲ್

ಯಾದಗಿರಿ ಜಿಲ್ಲೆಯಲ್ಲಿ ಅನೇಕ ಜನ ಸಾಹಿತ್ಯ ಆಸಕ್ತರಿದ್ದು, ಇತ್ತಿಚಿನ ಹೊಸ ತಲೆಮಾರಿನ ಯುವಕರು ಕೂಡ ಬರಹದಲ್ಲಿ ತೊಡಗಿಕೊಂಡಿರುವುದು ಆಶಾದಾಯಕ ಬೆಳವಣಿಗೆ. ಕವಿತೆ, ಗಜಲ್, ಹೈಕು ಬರೆಯುತ್ತಿರುವ ನಿವುಗಳು ಮುಂದೆ ಶಹರಿಗಳನ್ನು ಬರೆಯಿರಿ, ಕಥೆ, ಕಾದಂಬರಿಗಳನ್ನು ಬೆರೆಯಿರಿ ಜೊತೆಗೆ ಹೆಚ್ಚು ಹೆಚ್ಚಾಗಿ ಎಲ್ಲಾ ಪ್ರಾಕಾರದ ಪುಸ್ತಕಗಳನ್ನು ಮೊದಲು ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಹಿರಿಯ ಸಾಹಿತಿ ಸಿದ್ರಾಮ ಹೊನ್ಕಲ್ ಹೇಳಿದರು.