ಕೊಪ್ಪಳ: ಕವಿಗಳು ತಮ್ಮ ಕವನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡುತ್ತಾರೆ. ಕವನಗಳಲ್ಲಿ ಅಪಾರ ಶಕ್ತಿ ಅಡಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕವಿತೆ ಸಹಕಾರಿಯಾಗುತ್ತವೆ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಮಾನ್ವಿ ಪಾಷಾ ಹೇಳಿದರು.
ನಗರದಲ್ಲಿ ಆಲ್ ಇಂಡಿಯಾ ಮುಷಾಯಿರಾ ಕಮಿಟಿಯಿಂದ ಸ್ಥಳೀಯ ಕವಿಗಳಿಗಾಗಿ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಮುಷಾಯಿರಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದರು.ಕವಿಗಳು ರಚಿಸುವ ಕವನ ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಗೆ ಉತ್ತಮ ಚಿಂತನೆಗೆ ಪ್ರೇರಣೆ ನೀಡುತ್ತವೆ. ಕವಿತೆಯ ಮೂಲಕ ಸಮಾಜದ ಸಮಸ್ಯೆ, ಮಾನವೀಯ ಮೌಲ್ಯ ಹಾಗೂ ಜೀವನದ ವಿವಿಧ ಆಯಾಮ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಹುದು. ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ನಗರ ಆಶ್ರಯ ಸಮಿತಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಹುಸೇನ್ ಪಿರಾ ಮುಜಾವರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕವಿಗಳು ರಚಿಸುವ ಪ್ರತಿಯೊಂದು ಸಾಲಿನಲ್ಲಿಯೂ ಉತ್ತಮ ಸಂದೇಶ ಅಡಗಿರುತ್ತದೆ. ಕವಿತೆಯಲ್ಲಿರುವ ಉತ್ತಮ ವಿಚಾರ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಜೀವನ ಸಾರ್ಥಕವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಹಾಗೂ ಉರ್ದು ಸಾಹಿತಿ-ಕವಿ ಅನ್ವರ್ ಹುಸೇನ್, ಹಿರಿಯ ಸಮಾಜ ಸೇವಕ ಹಾಗೂ ಸಾಹಿತಿ ಸಮದ್ ಸಿದ್ದಿಕಿ, ಉರ್ದು ಕವಿ ಎಂ.ವಿಜಾರತ್ ಅಲಿ ಹಾಗೂ ಯುವ ಕವಿ ಅಫ್ಹಾನ್ ಸಿದ್ದಿಕಿ ಉರ್ದು ಕವನ ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.
ಮಹಮ್ಮದ್ ಗೌಸ್ ಗೆಟೀನ್ ಕನ್ನಡ ಕವನ ವಾಚನ ಮಾಡಿದರು. ದಾವೂದ್ ಹುನುಗುಂದ್, ಸೈಯದ್ ಇಮಾಮ್ ಹುಸೇನ್ ಸಿಂದೋಗಿ ಹಾಗೂ ಸಿದ್ದೀಕ್ ಹುಸೇನ್ ಕರ್ಕಿಹಳ್ಳಿ ಕವನ, ಗಜಲ್ ಹಾಗೂ ಹಾಸ್ಯ ಕವನ ವಾಚಿಸಿ ಪ್ರೇಕ್ಷಕರನ್ನು ರಂಜಿಸಿದರು.
ಎಂ. ಬದಿಯುದ್ದೀನ್ ಅಹಮದ್ ನವೀದ್ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿ ಕವಿಗೋಷ್ಠಿಗೆ ಮತ್ತಷ್ಟು ಮೆರುಗು ತಂದರು. ಹಿರಿಯ ಪತ್ರಕರ್ತ ಸಾಧಿಕ್ ಅಲಿ ಹಾಗೂ ಖಲೀಫಾ ಸಾಹೇಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜದ ಮುಖಂಡ ಅಬ್ದುಲ್ ಅಜೀಜ್ ಮಾನ್ವಿಕರ್, ಯುವ ನಾಯಕ ಸಿರಾಜ್ ಲಾಟಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕವಿಗೋಷ್ಠಿ ಹಾಗೂ ಮುಷಾಯಿರಾ ಕಾರ್ಯಕ್ರಮ ಯಶಸ್ವಿಗೊಳಿಸಿದರು.