ಕವನ ಬರೆಯಲೆಂದೆ ಒತ್ತಡದಿಂದ ಕುಳಿತಾಗ ಎಂದಿಗೂ ಅದು ಪರಿಪಕ್ಷ ಕವನವಾಗಲು ಸಾಧ್ಯವಿಲ್ಲ. ಅಕ್ಷರ ಜೋಡಣೆಯ ಪದಗಳಾಗುತ್ತವೆ. ಕವಿ ಮನಸ್ಸು ಮಾಡಿದರೆ ಸಮಾಜದಲ್ಲಿನ ನ್ಯೂನತೆ ತನ್ನ ವಕ್ರ ಕವನಗಳಿಂದ ಬಿತ್ತರಿಸಿದಾಗ ಅದು ಬೇಗನೆ ಮನ ಮುಟ್ಟುತ್ತದೆ.
ಮುಂಡರಗಿ: ಪ್ರಕೃತಿಯ ಎಲ್ಲ ಚಟುವಟಿಕೆಗಳ ಪ್ರಭಾವ ದೇಹದ ಮೇಲೆ ಆಗುವುದರಿಂದ ಕವಿ ಸದಾ ಪರಿಸರಪ್ರೇಮವನ್ನು ಬೆಳೆಸಿಕೊಂಡು ಕವಿತೆಗಳ ಮೂಲಕ ಋಣ ತೀರಿಸುವ ಪ್ರಯತ್ನ ಮಾಡಬೇಕು. ಪರಿಸರಪ್ರಜ್ಞೆಯನ್ನು ಸದಾ ಕವಿ ಹೊಂದಿರಬೇಕು ಮತ್ತು ಕಾವ್ಯ ಪ್ರತಿಬಿಂಬಿಸಬೇಕು ಎಂದು ಗದುಗಿನ ಕವಿ ಡಿ.ವಿ. ಬಡಿಗೇರ ಹೇಳಿದರು.
ಕಪ್ಪತಗುಡ್ಡದ ಸೆರಗಿನಲ್ಲಿರುವ ದೇವರೆಡ್ಡಿ ಅಗಸನಕೊಪ್ಪ ಕೃಷಿ ಆಶ್ರಯದಲ್ಲಿ(ಕಡಕೋಳ ಬಳಿ) ಗದಗ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಕಸಾಪ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕವಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕವನ ಬರೆಯಲೆಂದೆ ಒತ್ತಡದಿಂದ ಕುಳಿತಾಗ ಎಂದಿಗೂ ಅದು ಪರಿಪಕ್ಷ ಕವನವಾಗಲು ಸಾಧ್ಯವಿಲ್ಲ. ಅಕ್ಷರ ಜೋಡಣೆಯ ಪದಗಳಾಗುತ್ತವೆ. ಕವಿ ಮನಸ್ಸು ಮಾಡಿದರೆ ಸಮಾಜದಲ್ಲಿನ ನ್ಯೂನತೆ ತನ್ನ ವಕ್ರ ಕವನಗಳಿಂದ ಬಿತ್ತರಿಸಿದಾಗ ಅದು ಬೇಗನೆ ಮನ ಮುಟ್ಟುತ್ತದೆ. ಅದರ ಪರಿಣಾಮವೂ ಅಗಾಧವಾಗಿರುತ್ತದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಕೃತಿ ಮಡಿಲಾದ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾಗಿರುವ ಕಪ್ಪತ್ತಗುಡ್ಡದಲ್ಲಿ ನೂರಾರು ಕವಿಗಳನ್ನು ಸಮ್ಮಿಲನಗೊಳಿಸಿದ್ದು ಪರಿಸರವಾದಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಪ್ಪತ್ತಗುಡ್ಡದಲ್ಲಿ ಕವಿ ಸಮ್ಮೇಳನ ನಡೆಸಲು ಸಹಕರಿಸಿದ ಅಗಸನಕೊಪ್ಪ ಕುಟುಂಬ ಹಾಗೂ ಸಹಕರಿಸಿದ ಇತರರೆಲ್ಲರೂ ಸ್ಮರಣೀಯರು. ಕಸಾಪ ಜಿಲ್ಲಾಧ್ಯಂತ ಅನೇಕ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಬಹಳಷ್ಟು ಸಾಹಿತಿಗಳು ಇನ್ನು ಹೆಚ್ಚು ಕಸಾಪದಲ್ಲಿ ಸಕ್ರಿಯವಾಗಬೇಕು. ಹೀಗಾದಾಗ ಮಾತ್ರ ಸಾಹಿತ್ಯ, ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದರು.ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾವ್ಯ, ಸಾಹಿತ್ಯ, ಕವನ ಒಳಮನಸ್ಸಿನಿಂದ ಬರಬೇಕಾಗಿದ್ದು, ಇದು ಅಂತರಂಗದ ಸಂಗತಿ. ಕಾವ್ಯ ಅನುಭವದ ಮೂಸೆಯಲ್ಲಿ ಮೂಡಿದಾಗ ಸಹಜ ಪ್ರೀತಿ, ಪ್ರೇಮ, ಅನುಕಂಪ, ಸಮಾಜದ ಕಾಳಜಿಯ ತುಡಿತ ತಾನಾಗಿಯೇ ಹೊರಹೊಮ್ಮುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಚಂದ್ರಶೇಖರ ವಸ್ತ್ರದ, ಡಾ. ಬಿ.ಜಿ. ಪಾಟೀಲ, ಆರ್‌ಎಫ್‌ಒ ಮಂಜುನಾಥ ಮೇಗಲಮನಿ, ದೇವರೆಡ್ಡಿ ಅಗಸನಕೊಪ್ಪ, ಸುಶೀಲಮ್ಮ ಅಗಸನಕೊಪ್ಪ, ರಮಾಕಾಂತ ಕಮತಗಿ, ಸುರೇಶ ಕುಂಬಾರ, ಡಿ.ಎಲ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿ, ಈಶ್ವರ ಮೆಡ್ಲೇರಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಮುಖ್ಯ ವೇದಿಕೆ ಹಾಗೂ ಸಮಾನಾಂತರ ವೇದಿಕೆಯಲ್ಲಿ ನೂರಾರು ಕವಿಗಳು ಒಳಗೊಂಡ ಕವಿಗೋಷ್ಠಿ ಜರುಗಿದವು.