ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪೊಲೀಸ್ ಇಲಾಖೆಯಲ್ಲಿ ಕನಿಷ್ಠ 1 ವರ್ಷ ಪೂರೈಸಿದವರಿಗೆ ವರ್ಗಾವಣೆ ಮಾಡಲು ಅವಕಾಶವಿದೆ. ಈ ನಿಯಮವನ್ನು ಸಡಿಲಿಸಿ ಕನಿಷ್ಠ 2 ವರ್ಷ ಒಂದೇ ಕಡೆ ಸೇವೆ ಸಲ್ಲಿಸಲು ಅವಕಾಶ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿಂದು ಕ್ಯಾತ್ಸಂದ್ರದ ಕ್ರೀಡಾ ಸಂಕೀರ್ಣದಲ್ಲಿ ಸರ್ಕಾರಿ ಅಧಿಕಾರಿ/ ನೌಕರರು ಹಾಗೂ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಯಾವುದೇ ಸರ್ಕಾರಿ ಅಧಿಕಾರಿ/ ನೌಕರರಿಗೆ ವರ್ಗಾವಣೆಯ ತೊಂದರೆ ಕೊಡುವುದಿಲ್ಲ. ಆದರೆ ಅಧಿಕಾರಿ/ ನೌಕರರು ಯಾರಿಗೂ ಅನ್ಯಾಯವಾಗದಂತೆ ಮೇಲು-ಕೀಳು ಎಂಬ ಬೇಧ-ಭಾವ ಮಾಡದೆ ಸರ್ಕಾರಿ ಸೇವೆ ಒದಗಿಸುವ ಮೂಲಕ ಜಿಲ್ಲೆಯನ್ನು ಮಾದರಿಯಾಗಿಸಬೇಕು ಎಂದು ತಿಳಿಸಿದರು.ಕೆಲಸದ ಒತ್ತಡಗಳ ನಡುವೆ ಸರ್ಕಾರಿ ಅಧಿಕಾರಿ-ನೌಕರರು ತಮ್ಮ ಆರೋಗ್ಯವನ್ನು ಕಡೆಗಣಿಸಬಾರದೆಂಬ ಉದ್ದೇಶದಿಂದ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವುದು ಉತ್ತಮ ಎಂದರು.
ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಇಂತಹ ಶಿಬಿರ ಸಹಕಾರಿಯಾಗುತ್ತದೆ. ರೋಗದ ಗಂಭೀರತೆ ಪ್ರಾರಂಭದಲ್ಲಿಯೇ ಕಂಡುಕೊಂಡರೆ ಗುಣಪಡಿಸಲು ಸಾಧ್ಯವಾಗುತ್ತದೆ ಎಂದರಲ್ಲದೆ ಆರೋಗ್ಯ ಶಿಬಿರದಲ್ಲಿ ತಪಾಸಣೆಗೊಳಗಾಗುವ ಅಧಿಕಾರಿ/ನೌಕರರ ಆರೋಗ್ಯ ಮಾಹಿತಿಯನ್ನು ಗಣಕೀಕರಣಗೊಳಿಸುವ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.ಜಿಲ್ಲೆಯ ಜನ ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ಪಂಚಾಯತಿ ವತಿಯಿಂದ ಈಗಾಗಲೇ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸಮಗ್ರ ಆರೋಗ್ಯ ತಪಾಸಣೆ ಅಭಿಯಾನದಡಿ 2.5 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, 17 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಬೇಕಿದೆ ಎಂದು ತಿಳಿಸಿದರು.
ನಗರದಲ್ಲಿ ಜನವರಿ ೨೯ರಂದು ಜರುಗಿದ ಮುಖ್ಯಮಂತ್ರಿಗಳ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಕೃತಜ್ಞತೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ವಿನೂತನ ಆಡಳಿತ ವ್ಯವಸ್ಥೆ ತರಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉತ್ಸುಕರಾಗಿರುವುದು ಸಂತಸದ ಸಂಗತಿ. ಸಾರ್ವಜನಿಕರು ಅಹವಾಲುಗಳನ್ನು ಹೊತ್ತು ಸರ್ಕಾರಿ ಕಚೇರಿಗೆ ಭೇಟಿ ನೀಡಿದಾಗ ಅಧಿಕಾರಿ/ನೌಕರರು ಸಮಾಧಾನದಿಂದ ಸ್ಪಂದಿಸಿ ಅವರಲ್ಲಿ ನನ್ನ ಕೆಲಸವಾಗುತ್ತದೆ ಎಂಬ ವಿಶ್ವಾಸ ಮೂಡಿಸುವುದೇ ಉತ್ತಮ ಆಡಳಿತ ಎಂಬುದು ನನ್ನ ಅಭಿಪ್ರಾಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರ ನಂಬಿಕೆ ಗಳಿಸುವಂತಹ ಸೇವೆ ನೀಡಬೇಕೆಂದು ಕಿವಿ ಮಾತು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ ನೌಕರರ ಆರೋಗ್ಯ ಉತ್ತಮವಾಗಿದ್ದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಮನಗಂಡು ಈ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಉತ್ತಮ ಆಹಾರಶೈಲಿ, ಯೋಗಾಭ್ಯಸದಿಂದ ಶಾರೀರಿಕ ಹಾಗೂ ಮಾನಸಿಕ ಒತ್ತಡಗಳಿಂದ ಹೊರಬಹುದಾಗಿದೆ ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯತ್ ಸಿಇಒ ಜಿ. ಪ್ರಭು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ. ಮಂಜುನಾಥ್ ಸ್ವಾಗತಿಸಿದರು. ತಹಸೀಲ್ದಾರ್ ಸಿದ್ದೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಉಪವಿಭಾಗಾಧಿಕಾರಿಗಳಾದ ಹೋಟೆಲ್ ಶಿವಪ್ಪ, ಸಪ್ತಾಶ್ರೀ, ಗೌರವಕುಮಾರ್ ಶೆಟ್ಟಿ, ಎಲ್ಲಾ ಇಲಾಖೆ ಅಧಿಕಾರಿ/ ನೌಕರರು ಹಾಜರಿದ್ದರು.
ಇದಕ್ಕೂ ಮುನ್ನ ಸಚಿವ ಪರಮೇಶ್ವರ್ ಅವರು ಆರೋಗ್ಯ ತಪಾಸಣೆ ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆಗೊಳಗಾದರು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ರಕ್ತಹೀನತೆ, ಕಣ್ಣಿನ ಪರೀಕ್ಷೆ, ಕುಷ್ಠರೋಗ ತಪಾಸಣೆ, ದಂತ ತಪಾಸಣೆ, ಇಸಿಜಿ, ಹೃದ್ರೋಗ ತಪಾಸಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರವಣದೋಷವುಳ್ಳ 5 ಬಾಲಕಿಯರಿಗೆ ಶ್ರವಣ ಸಾಧನವನ್ನು ವಿತರಿಸಲಾಯಿತು. ಮುಖ್ಯಮಂತ್ರಿಗಳ ಕಾರ್ಯಕ್ರಮದ ಯಶಸ್ವಿ-ಭೋಜನ ಕೂಟ ಮುಖ್ಯಮಂತ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಇಲಾಖೆ ಅಧಿಕಾರಿ, ನೌಕರರು, ಪತ್ರಕರ್ತರಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.
QUOTEಆಡಳಿತದಲ್ಲಿ ಚುರುಕು ತರಲು ಅನುಸರಿಸುವ ಸರ್ಕಾರಿ ಅಧಿಕಾರಿ/ನೌಕರರ ವರ್ಗಾವಣೆ ಪದ್ಧತಿ ಮೇಲೆ ನನಗೆ ನಂಬಿಕೆ ಕಡಿಮೆ. ಕನಿಷ್ಠ 3 ವರ್ಷವಾದರೂ ಒಂದೇ ಕಡೆ ಕೆಲಸ ಮಾಡಲು ಅವಕಾಶ ನೀಡುವುದರಿಂದ ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವರ್ಗಾವಣೆ ಮಾಡಬೇಕು.
ಡಾ.ಜಿ. ಪರಮೇಶ್ವರ್ ಗೃಹ ಸಚಿವರು