ಕಾನೂನು-ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆಗಳ ಕಾಲ ಕರ್ತವ್ಯ ಸನ್ನದ್ಧರಾಗುವ ಆರಕ್ಷಕರು ಸಮಾಜದ ಸುರಕ್ಷತೆಯ ಬಹುಮುಖ್ಯ ಅಂಗ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕಾನೂನು-ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆಗಳ ಕಾಲ ಕರ್ತವ್ಯ ಸನ್ನದ್ಧರಾಗುವ ಆರಕ್ಷಕರು ಸಮಾಜದ ಸುರಕ್ಷತೆಯ ಬಹುಮುಖ್ಯ ಅಂಗ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.ನಗರದ ಸಾಯಿ ಉದ್ಯಾನವನದ ಆವರಣದಲ್ಲಿ ಎ.ಆರ್.ಜೆ.ಗುರುಕುಲ ಅಂತಾರಾಷ್ಟ್ರೀಯ ಶಾಲೆಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ದೇಶ ರಕ್ಷಕರಿಗೆ, ಆರಕ್ಷಕರಿಗೆ ಹಾಗೂ ಹಲವಾರು ಸೇವಾ ನಿರತರಿಗೆ ಗೌರವಿಸಲು ಆಯೋಜಿಸಿದ್ದ ಸೆಲ್ಯೂಟ್ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರ ಭಾಷೆ ಕಠಿಣವಿರಬಹುದು. ಅಪರಾಧಿಕ ಚಟುವಟಿಕೆಗಳ ವಿರುದ್ಧ ಸೆಣಸಾಟದಲ್ಲಿ ಅಪರಾಧಿಗಳಿಗೆ ಕಠಿಣ ಭಾಷೆಯೇ ಪ್ರಯೋಗಿಸಬೇಕಾಗುತ್ತದೆ. ಆದರೆ, ಪೊಲೀಸರು ಜನಸ್ನೇಹಿ. ಈಗ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅವರನ್ನು ಗೌರವಿಸಲು ಅಪೂರ್ವವಾದ ಸೆಲ್ಯೂಟ್ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಲಾಡಲಿ ಫೌಂಡೇಶನ್ ರಾಯಬಾರಿ ಕು.ಶಿಫಾ ಜಮಾದಾರ ಮಾತನಾಡಿ, ಸಮವಸ್ತ್ರ ಧರಿಸಿದ ಅಧಿಕಾರಿಗಳು ಪ್ರತಿಯೊಂದು ಅರ್ಥದಲ್ಲಿಯೂ ರಾಷ್ಟ್ರದ ರಕ್ಷಕರು ಸೈನಿಕರು ಗಡಿಯಲ್ಲಿ ಬಾಹ್ಯ ಬೆದರಿಕೆಗಳಿಂದ ನಮ್ಮ ದೇಶವನ್ನು ರಕ್ಷಿಸಿದರೇ ಆಂತರಿಕ ರಕ್ಷಣಾ ಪಡೆಗಳು ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಮೂಲಕ ರಾಷ್ಟ್ರವನ್ನು ಒಳಗಿನಿಂದ ರಕ್ಷಿಸುತ್ತಾರೆ ಎಂದರು.ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧಿಕ್ಷಕ ರಾಮನಗೌಡ ಹಟ್ಟಿ, ಉಪಪೊಲೀಸ್ ವರಿಷ್ಠಾಧಿಕಾರಿ ಡಾ.ಬಸವರಾಜ ಯಲಿಗಾರ, ಶ್ರೀದೇವಿ ಕಾರಜೋಳ, ಶರಣು ಸಬರದ, ವರುಣ ಕುಲಕರ್ಣಿ, ಶಾರುಕ ತಹಸೀಲ್ದಾರ್ ಉಪಸ್ಥಿತರಿದ್ದರು.
ಎಆರ್‌ಜೆ ಫೌಂಡೇಶನ್ ಅಧ್ಯಕ್ಷ ಪಂ.ಸಂಜೀವಾಚಾರ್ಯ ಮಧಭಾವಿ ಆಶೀರ್ವಚನ ನೀಡಿದರು. ಸಮಾಜದ ಸುರಕ್ಷತೆಗಾಗಿ ಅನುಪಮವಾಗಿ ತೊಡಗಿಸಿಕೊಂಡಿರುವ ಸುಮಾರು 80 ಪೊಲೀಸ್‌ರಿಗೆ, ಸೈನಿಕರಿಗೆ, ಅಗ್ನಿಶಾಮಕ ಸಿಬ್ಬಂದಿ ಲೋಕಾಯುಕ್ತ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರಿಗೆ ಸೇರಿದಂತೆ ವಿವಿಧ ರಕ್ಷಣಾ ಸಿಬ್ಬಂದಿಗೆ ಸನ್ಮಾನಿಸಲಾಯಿತು. ನಂತರ ಖ್ಯಾತ ಸಂಗೀತ ಗಾಯಕಿ ಎಂ.ಡಿ.ಪಲ್ಲವಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ದೇಶಭಕ್ತಿ ಕುರಿತು ಶಾಲಾ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯ ಹಾಗೂ ಸಿಂಧೂರ ಅಪರೇಶನ್ ನೃತ್ಯ ಮೂಲಕ ದೇಶದ ಪರಾಕ್ರಮವನ್ನು ಪ್ರದರ್ಶಿಸಿದರು.