ಸಾರಾಂಶ
ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಮ್ಮ ಮನೆಗೆ ಬೀಗ ಹಾಕಿ ಕುಳಿತಿದ್ದ ವಕೀಲ ಜಗದೀಶ್ ಅವರನ್ನು ಶುಕ್ರವಾರ ಕೊನೆಗೆ ಬೀಗ ಮುರಿದು ಒಳ ಪ್ರವೇಶಿಸಿ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಮ್ಮ ಮನೆಗೆ ಬೀಗ ಹಾಕಿ ಕುಳಿತಿದ್ದ ವಕೀಲ ಜಗದೀಶ್ ಅವರನ್ನು ಶುಕ್ರವಾರ ಕೊನೆಗೆ ಬೀಗ ಮುರಿದು ಒಳ ಪ್ರವೇಶಿಸಿ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಮೂರು ದಿನಗಳ ಹಿಂದೆ ಮಂಜುನಾಥ್ ಎಂಬುವರ ನೀಡಿದ ದೂರು ಆಧರಿಸಿ ವಕೀಲ ಜಗದೀಶ್ ವಿರುದ್ಧ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ಆರೋಪದ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ವಕೀಲರಿಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆದರೆ ಈ ನೋಟಿಸ್‌ಗೆ ಕ್ಯಾರೇ ಎನ್ನದೆ ಮನೆಯೊಳಗೆ ಕುಳಿತಿದ್ದ ವಕೀಲನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗೆ ಧರ್ಮಸ್ಥಳದಲ್ಲಿ ಅನಧಿಕೃತವಾಗಿ ಮೃತದೇಹಗಳ ಹೂತ ಪ್ರಕರಣ ಕುರಿತು ಸಾಮಾಜಿಕ ಜಾಲತಾಣಗಲ್ಲಿ ವಕೀಲ ಜಗದೀಶ್ ಹೇಳಿಕೆ ನೀಡಿದ್ದರು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಜಾತಿಗಳ ಬಗ್ಗೆ ಕೀಳ ಮಟ್ಟದ ಭಾಷೆ ಬಳಸಿ ನಿಂದಿಸಿ ಸಮಾಜದ ಶಾಂತಿಗೆ ಜಗದೀಶ್ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಮಂಜುನಾಥ್ ದೂರು ನೀಡಿದ್ದರು. ಅಲ್ಲದೆ ಇದೇ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ,ಪರಮೇಶ್ವರ್ ಬಗ್ಗೆಯೂ ಜಗದೀಶ್ ನಾಲಗೆ ಹರಿಬಿಟ್ಟಿದ್ದರು. ಈ ವಕೀಲನ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ವಿಧಾನಸಭಾ ಅಧಿವೇಶನದಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹಕ್ಕು ಚ್ಯುತಿ ಮಂಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಜಗದೀಶ್ ಅವರಿಗೆ ಸಂಕಷ್ಟ ಎದುರಾಗಿದೆ.ಮನೆಯೊಳಗೆ ಅವಿತಿದ್ದ ವಕೀಲ!
ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ಕೊಡಿಗೇಹಳ್ಳಿಯಲ್ಲಿರುವ ಮನೆಗೆ ಜಗದೀಶ್ ಅವಿತುಕೊಂಡಿದ್ದರು. ತಮ್ಮ ಮನೆಯೊಳಗೆ ಹೊರಗಿನವರು ಪ್ರವೇಶಿಸದಂತೆ ಅವರು ಬೀಗ ಹಾಕಿಕೊಂಡಿದ್ದರು. ವಿಚಾರಣೆಗೆ ಬರುವಂತೆ ನೋಟಿಸ್ ಬಾರದ ಜಗದೀಶ್ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ್ದರು. ಆಗಲೂ ಮನೆ ಬೀಗ ತೆರೆಯುವಂತೆ ಎರಡ್ಮೂರು ಬಾರಿ ವಿನಂತಿಸಿದರೂ ಸಹ ಅವರು ಸ್ಪಂದಿಸಿಲ್ಲ. ಕೊನೆಗೆ ಬೀಗ ತಯಾರಿಸುವವರನ್ನು ಕರೆಸಿದ ಪೊಲೀಸರು, ಬಳಿಕ ಮನೆ ಬೀಗ ಮುರಿಸಿ ಒಳ ಪ್ರವೇಶಿಸಿದ್ದಾರೆ. ಆಗ ಪೊಲೀಸರ ಮೇಲೆ ಎಗರಾಡಿ ಜಗದೀಶ್ ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ಅರಚಾಟಗಳಿಗೆ ಬಗ್ಗದ ಪೊಲೀಸರು, ಬಲವಂತವಾಗಿ ವಕೀಲರನ್ನು ಜೀಪಿಗೆ ಹತ್ತಿಸಿಕೊಂಡು ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.