ಕಾನೂನು ಸುವ್ಯವಸ್ಥೆ, ಶಿಸ್ತು ಪಾಲನೆಗೆ ಮಾದರಿಯಾಬೇಕಾಗಿದ್ದ ಪೋಲಿಸ್ ಇಲಾಖೆಯಲ್ಲಿಯೇ ಅಧಿಕಾರದ ಆಸೆ, ವೈಯಕ್ತಿಕ ಜಿದ್ದಾಜಿದ್ದಿ ಮತ್ತು ಆಂತರಿಕ ಕಚ್ಚಾಟ ಹಾಗೂ ಸಿಬ್ಬಂದಿ ದ್ರೋಹದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೊಳಗಾದ ಆಡಿಯೋ ವೈರಲ್ ಆದ ಹಿನ್ನೆಲೆ ಹಳಿಯಾಳ ಠಾಣೆಯ ಮೂವರು ಪಿಎಸ್‌ಐಗಳ ತಲೆದಂಡವಾಗಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಕಾನೂನು ಸುವ್ಯವಸ್ಥೆ, ಶಿಸ್ತು ಪಾಲನೆಗೆ ಮಾದರಿಯಾಬೇಕಾಗಿದ್ದ ಪೋಲಿಸ್ ಇಲಾಖೆಯಲ್ಲಿಯೇ ಅಧಿಕಾರದ ಆಸೆ, ವೈಯಕ್ತಿಕ ಜಿದ್ದಾಜಿದ್ದಿ ಮತ್ತು ಆಂತರಿಕ ಕಚ್ಚಾಟ ಹಾಗೂ ಸಿಬ್ಬಂದಿ ದ್ರೋಹದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೊಳಗಾದ ಆಡಿಯೋ ವೈರಲ್ ಆದ ಹಿನ್ನೆಲೆ ಹಳಿಯಾಳ ಠಾಣೆಯ ಮೂವರು ಪಿಎಸ್‌ಐಗಳ ತಲೆದಂಡವಾಗಿದೆ.

ಹಳಿಯಾಳ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಕೃಷ್ಣ ಅರಕೇರಿ, ಎರಡೂ ದಿನಗಳ ಹಿಂದಷ್ಟೇ ದಾಂಡೇಲಿಯಿಂದ ವರ್ಗವಾಗಿ ಬಂದಿದ್ದ ಕಾನೂನು ಸುವ್ಯವಸ್ಥೆಯ ವಿಭಾಗದ ಪಿಎಸ್‌ಐ ಕಿರಣ ಪಾಟೀಲ್ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಸೇವೆ ಸಲ್ಲಿಸಿ ಎಸ್ಐಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವಿನೋದ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ. ಮಂಕಿ ಠಾಣೆಯ ಪಿಎಸ್‌ಐ ಕುಮಾರ್ ಕಾಂಬಳೆ ಅವರನ್ನು ಹಳಿಯಾಳ ಠಾಣೆಯ ಕಾನೂನು-ಸುವ್ಯವಸ್ಥೆ ವಿಭಾಗದ ಪ್ರಭಾರೆಯಾಗಿ ನಿಯುಕ್ತಗೊಳಿಸಲಾಗಿದೆ. ಆಡಿಯೋ ವೈರಲ್ ಆದ ಬೆನ್ನಲೆ ಎಸ್ಪಿ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕೃಷ್ಣ ಮೂರ್ತಿಗೆ ಜವಾಬ್ದಾರಿ ವಹಿಸಿದ್ದರು. ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಮೂವರು ಪಿಎಸ್ಐಗಳನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಎಸ್ಪಿ ದೀಪನ್ ಆದೇಶಿಸಿದ್ದಾರೆ.

3 ತಿಂಗಳಲ್ಲಿ ನಾಲ್ವರ ತಲೆದಂಡ:

ಆಡಿಯೋ ಪ್ರಕರಣದಲ್ಲಿ ಮೂವರು ಪಿಎಸ್‌ಐ ಅಮಾನತು ಆದರೆ ಜೂನ್ ತಿಂಗಳಲ್ಲಿ ರೌಡಿಶೀಟರ್‌ನೊರ್ವ ನಡೆಸಿದ ದಾಂಧಲೇ ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಬಸವರಾಜ ಮಬನೂರ ಸಸ್ಪೆಂಡ್ ಆಗಿದ್ದರು. ಎಂಟು ಸಿಬ್ಬಂದಿಗಳನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಹೀಗೆ ಹಳಿಯಾಳ ಠಾಣೆಯಲ್ಲಿ ಕಳೆದ ಮೂರು ತಿಂಗಳ ಅವದಿಯಲ್ಲಿ ನಾಲ್ವರು ಪಿಎಸ್‌ಐ ಸಸ್ಪೆಂಡ್ ಆಗಿದ್ದು ಇದೇ ಮೊದಲ ಬಾರಿಗೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಆಡಿಯೋ ವೈರಲ್ ಆದ್ದದು ಹೇಗೆ?:

ವೈಯುಕ್ತಿಕ ಮಾತುಕತೆಯ ಆಡಿಯೋವೊಂದು ಪೊಲೀಸ್ ಇಲಾಖೆಯ ಒಳವಲಯದಿಂದಲೇ ಹೊರಬಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಹೇಗೆ? ಎಸ್ಪಿ ಮುಂದೇ ಬಹಿರಂಗ ಪಡಿಸುವ ಬದಲು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿ ಇಲಾಖೆಯ ಮಾನ ಹರಾಜು ಮಾಡುವುದರ ಹಿಂದಿನ ಉದ್ದೇಶವೇನು? ಇಲಾಖೆಯ ಗೌಪ್ಯತೆ ಮತ್ತು ಶಿಸ್ತು ಉಲ್ಲಂಘಿಸಿ ಆಡಿಯೋ ವೈರಲ್ ಮಾಡಿದವರು ಯಾರೂ ಎಂಬುದರ ಸಮಗ್ರ ತನಿಕೆಯಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.ಪೋಸ್ಟಿಂಗ್‌ಗೂ ಹಣ ನಿಗದಿಯೇ? ತನಿಖೆ ಬಗ್ಗೆ ವ್ಯಾಪಕ ಕುತೂಹಲ:

ಪೊಲೀಸ್ ಇಲಾಖೆಯಲ್ಲಿ ಹುದ್ದೆ ಹಾಗೂ ಪೋಸ್ಟಿಂಗ್ ಪಡೆಯಲು ಹಣದ ವ್ಯವಹಾರ ನಡೆಯುತ್ತದೆ ಎಂಬ ಆರೋಪದೊಂದಿಗೆ ವೈರಲ್ ಆಗಿರುವ ಆಡಿಯೋ ಇದೀಗ ಇಲಾಖೆಯೊಳಗಿನ ವ್ಯವಸ್ಥೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಿಎಸ್‌ಐಗಳನ್ನು ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಆದರೆ, ಮೂವರು ಅಧಿಕಾರಿಗಳ ಅಮಾನತಿನಿಂದ ಪ್ರಕರಣ ಮುಗಿಯುವುದಿಲ್ಲ. ವೈರಲ್ ಆಗಿರುವ ಆಡಿಯೋದಲ್ಲಿ ಕೇಳಿಬರುತ್ತಿರುವ ಹುದ್ದೆ, ಪೋಸ್ಟಿಂಗ್‌ಗಾಗಿ ಹಣದ ವ್ಯವಹಾರ, ಪ್ರತಿ ತಿಂಗಳು ಹಣ ನೀಡಬೇಕೆಂಬ ಮಾತುಗಳ ಹಿಂದೆ ಎಷ್ಟರ ಮಟ್ಟಿಗೆ ಸತ್ಯವಿದೆ ಎಂಬುದೇ ಈಗ ಪ್ರಮುಖ ಪ್ರಶ್ನೆಯಾಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.ಆಡಿಯೋ ನೈಜವೇ?:

ಧ್ವನಿಗಳು ಸಂಬಂಧಪಟ್ಟ ಅಧಿಕಾರಿಗಳದ್ದೇ? ಸಂಭಾಷಣೆಯನ್ನು ಎಡಿಟ್ ಮಾಡಲಾಗಿದೆಯೇ? ಹಣದ ವ್ಯವಹಾರ ನಿಜವಾಗಿಯೂ ನಡೆದಿದೆಯೇ? ಎಂಬ ಎಲ್ಲ ಪ್ರಶ್ನೆಗಳಿಗೆ ವೈಜ್ಞಾನಿಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆದು ಉತ್ತರ ಸಿಗಬೇಕಿದೆ.ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮತ್ತು ಪೋಸ್ಟಿಂಗ್ ಆಡಳಿತಾತ್ಮಕ ಪ್ರಕ್ರಿಯೆಯ ಭಾಗ. ಆದರೆ ಅದಕ್ಕೂ ಹಣದ ‘ದರ’ ನಿಗದಿಯಾಗಿದೆ ಎಂಬ ಆರೋಪ ಸಾಬೀತಾದರೆ ಅದು ಇಲಾಖೆಯ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತವಾಗಲಿದೆ. ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದ ವ್ಯವಸ್ಥೆಯಲ್ಲೇ ಇಂತಹ ಅಕ್ರಮ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದರೆ ಅದರ ಪರಿಣಾಮ ಗಂಭೀರವಾಗಲಿದೆ. ಹೀಗಾಗಿ ಅಮಾನತು ಕ್ರಮದ ಜತೆಗೆ ಆಡಿಯೋದಲ್ಲಿನ ಪ್ರತಿಯೊಂದು ಆರೋಪದ ಸತ್ಯಾಸತ್ಯತೆಯನ್ನೂ ಆಳವಾಗಿ ತನಿಖೆಗೊಳಪಡಿಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ಕಠಿಣ ಕ್ರಮವಾಗಬೇಕು ಎಂಬ ಆಗ್ರಹ ಜಿಲ್ಲೆಯಲ್ಲಿ ವ್ಯಕ್ತವಾಗಿದೆ.

ಆರೋಪ ಸುಳ್ಳೆಂದು ಸಾಬೀತಾದರೂ ಅದನ್ನೂ ಸ್ಪಷ್ಟಪಡಿಸಬೇಕು. ಇಲ್ಲವಾದರೆ, ಈ ಪ್ರಕರಣ ಪೊಲೀಸ್ ಇಲಾಖೆಯಷ್ಟೇ ಅಲ್ಲ, ಸರ್ಕಾರಕ್ಕೂ ಮುಜುಗರವಾಗಿ ಪರಿಣಮಿಸಲಿದೆ.

ಮೂವರು ಪಿಎಸ್ಐಗಳ ಅಮಾನತಿನಿಂದ ಪ್ರಕರಣ ಮುಕ್ತಾಯವಾಗದು. ಆಡಿಯೋದಲ್ಲಿನ ಸಂಭಾಷಣೆಗಳ ಬಗ್ಗೆ ತನಿಖೆ ಮುಂದುವರಿಯಲಿದೆ ಎನ್ನುತ್ತಾರೆ ಎಸ್ಪಿ ದೀಪನ್ ಎನ್.ಎಂ.