ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಸಾಮೂಹಿಕ ಗಣೇಶ ವಿಸರ್ಜನಾ ವೇಳೆ ಹಿಂದೂಗಳು ನಡೆಸಿದ್ದ ಬೃಹತ್ ಶಕ್ತಿ ಪ್ರದರ್ಶನದ ಪ್ರತಿಯಾಗಿ ಸೌಹಾರ್ದ ಸಾಮರಸ್ಯ ನಡಿಗೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಪ್ರಗತಿಪರ ಸಂಘಟನೆಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದರಿಂದ ಪಟ್ಟಣದಲ್ಲಿ ಸೋಮವಾರ ಬಹಿರಂಗ ಸಭೆಗೆ ಸೀಮಿತವಾಯಿತು.ಸಾಮರಸ್ಯ ನಡಿಗೆಗೆ ಮುಸ್ಲಿಂ ಮುಖಂಡರು ತನು, ಮನ, ಧನ ಅರ್ಪಿಸುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದರು. ಪಟ್ಟಣದಲ್ಲಿ ಶಾಂತ ಪರಿಸ್ಥಿತಿ ನೆಲಸಿದ್ದರಿಂದ ಸಾಮರಸ್ಯ ನಡಿಗೆಗೆ ಪೊಲೀಸರು ಆರಂಭದಲ್ಲಿಯೇ ಅವಕಾಶ ನೀಡದೆ ನಿರ್ಬಂಧ ವಿಧಿಸಿದ್ದರು. ಆದರೂ ಪಟ್ಟು ಬಿಡದ ಪ್ರಗತಿಪರ ಸಂಘಟನೆಗಳು ಸಾಮರಸ್ಯ ನಡಿಗೆ ಮಾಡಲು ಮುಂದಾಗಿದ್ದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ನಿರ್ಬಂಧ ಉಲ್ಲಂಘನೆ ಮಾಡಿ ಪಾದಯಾತ್ರೆ ನಡೆಸಿದರೆ ಸಂಘಟನೆಗಳ ಮುಖಂಡರನ್ನು ಬಂಧಿಸಲು ಸಿದ್ಧತೆ ನಡೆಸಿದ್ದರು.
ಇದರಿಂದ ಎಚ್ಚೆತ್ತುಕೊಂಡ ಮುಖಂಡರು ಪಟ್ಟಣದ ಗೋದಾಮು ಆವರಣದಲ್ಲಿ ರೈತ ಮುಖಂಡ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಾಮರಸ್ಯ ನಡಿಗೆಯನ್ನು ಟಿಎಪಿಸಿಎಂಎಸ್ ಗೋದಾಮು ಅವರಣದಲ್ಲೇ ನಡೆಸಿದ ಬಳಿಕ ಬಹಿರಂಗ ಸಭೆ ನಡೆಸಿದರು.ಜಿಲ್ಲೆಯಲ್ಲಿ ಕೋಮುವಾದಿಗಳ ಸ್ವಾರ್ಥ ರಾಜಕೀಯಕ್ಕೆ ಎಂದು ಅವಕಾಶ ನೀಡುವುದಿಲ್ಲ ಎನ್ನುವ ಮೂಲಕ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಗೆ ಮುಖಂಡರು ಪರೋಕ್ಷ ಎಚ್ಚರಿಕೆ ನೀಡಿದರು. ಪ್ರಗತಿಪರ ಸಂಘಟನೆಗಳ ಮುಖಂಡರಾದ ಶಿವಸುಂದರ್, ಭೂಮಿ ಗೌಡ, ಎಂ.ಸಿ.ಬಸವರಾಜು, ದೇವಿ, ಕುಮಾರಿ, ಟಿ.ಯಶವಂತ್, ಅಂದಾನಿ ಸೋಮನಹಳ್ಳಿ, ಮರಳಿಗ ಶಿವರಾಜು, ಮಹಮದ್ ಇಲಿಯಾಸ್, ಕಲೀಂಪಾಶ, ಎನ್.ಎಲ್.ಭರತ್ ರಾಜ್, ರೈತ ಮುಖಂಡರಾದ ಕೆಂಪೂಗೌಡ, ಬೋರಾಪುರ ಶಂಕರೇಗೌಡ, ಲಿಂಗಪ್ಪಾಜಿ, ಸಿ.ಎಂ.ದ್ಯಾವಪ್ಪ ಸೇರಿದಂತೆ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.ಸಂಘರ್ಷಕ್ಕೆ ಪೊಲೀಸರು, ಗುಪ್ತಚಾರ ಇಲಾಖೆ ವೈಫಲ್ಯವೇ ಕಾರಣ: ಭರತ್ ರಾಜ್
ಮದ್ದೂರು:ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಹಿಂದೂ ಮತ್ತು ಮುಸ್ಲಿಂ ಕೋಮುಗಳ ನಡುವೆ ನಡೆದ ಸಂಘರ್ಷಕ್ಕೆ ಪೊಲೀಸರು ಮತ್ತು ಗುಪ್ತಚಾರ ಇಲಾಖೆ ವೈಫಲ್ಯವೇ ಕಾರಣ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತರಾಜ್ ಕಿಡಿಕಾರಿದರು.
ಪಟ್ಟಣದ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆ ಆವರಣದಲ್ಲಿ ನಡೆದ ಸೌಹಾರ್ದ, ಸಾಮರಸ್ಯ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೊಲೀಸರಿಗೆ ಕ್ರಿಮಿನಲ್ ಗಳು ಯಾರು ಅಥವಾ ಸಜ್ಜನರು ಯಾರು ಎನ್ನುವುದೇ ಗೊತ್ತಿಲ್ಲ. ಪೊಲೀಸರು ಮತ್ತು ಗುಪ್ತಾಚಾರ ಇಲಾಖೆಗಳ ಪೆದ್ದ ಪೊಲೀಸರು ಜ್ಞಾನವೇ ಇಲ್ಲದಂತೆ ಅಜ್ಞಾನದಿಂದ ವರ್ತಿಸುತ್ತಾರೆ ಎಂದು ಟೀಕಿಸಿದರು.ಶಾಸಕರಾದ ಯತ್ನಾಳ್, ಸಿ.ಟಿ.ರವಿ ಹಾಗೂ ಸಂಸದ ಪ್ರತಾಪ್ ಸಿಂಹ ರಾಜ್ಯದಲ್ಲಿ ಶಾಂತಿ ಬಯಸುವುದಿಲ್ಲ ಕೋಮುವಾದವನ್ನು ಹುಟ್ಟು ಹಾಕುವುದೇ ಇವರ ಗುರಿಯಾಗಿದೆ ಎಂದು ಆರೋಪಿಸಿದರು.
ಪ್ರಗತಿಪರ ಸಂಘಟನೆ ಸಾಮರಸ್ಯ ನಡಿಗೆ ಇಲ್ಲಿಗೆ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ಸೌಹಾರ್ದ ಜಾತ್ರೆ ಮತ್ತು ಸಮಾರಂಭಗಳ ಮೂಲಕ ಹಿಂದೂ ಮತ್ತು ಮುಸ್ಲಿಂ ಐಕ್ಯತೆಗೆ ಹೋರಾಟ ನಡೆಸಲಿದೆ ಎಂದರು.