ಸಾರಾಂಶ
ಹೊಸಪೇಟೆ: ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ೨ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ, ವಿಜಯನಗರ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯ ಯುವ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಜಿಲ್ಲೆಯ ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಪಂಚಮಸಾಲಿ ಸಮಾಜದವರು, ಜಿಲ್ಲಾ ಕೇಂದ್ರ ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ (ಸಾಯಿಬಾಬ ಸರ್ಕಲ್) ದಿಂದ ಜಿಲ್ಲಾಧಿಕಾರಿ ಕಚೇರಿಯವರಿಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು.ಈ ವೇಳೆ ಯುವ ಘಟಕದ ರಾಜ್ಯಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ವೀರಶೈವ ಲಿಂಗಾಯತ ಪಂಚಮಸಾಲಿ ೨ಎ ಮೀಸಲಾತಿಗಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಲು ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪೊಲೀಸರಿಂದ ದೌರ್ಜನ್ಯ ಪೂರಕವಾಗಿ ಲಾಠಿ ಚಾರ್ಚ್ ಮಾಡಿಸಿದೆ. ನ್ಯಾಯಯುತ ಬೇಡಿಕೆಯನ್ನು ಈಡೇರಿಸುವ ಬದಲು ಸರ್ಕಾರ ಪೊಲೀಸರ ಮೂಲಕ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿದೆ. ಇದು ಖಂಡನೀಯವಾಗಿದೆ. ೨ಎ ಮೀಸಲಾತಿ ನೀಡುವರಿಗೆ ನಮ್ಮ ಹೋರಾಟ ನಿಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಪಂಚಮಸಾಲಿ ಸಮಾಜದವರು ಅತಿಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ನಮ್ಮ ಸರ್ಕಾರ ಬಂದರೆ ೨ಎ ಮೀಸಲಾತಿ ನೀಡುವುದಾಗಿ ಹೇಳಿದ್ದು, ಕೊಟ್ಟು ಮಾತು ಮರೆತು ಮೀಸಲಾತಿಗೆ ಆಗ್ರಹಿಸಿ ನಡೆಸಿದ ಸಮಾಜದ ಹೋರಾಟಗಾರರ ಮೇಲೆ ಲಾಠಿಚಾರ್ಚ್ ಮಾಡುವ ಮೂಲಕ ಸಮಸ್ತ ಪಂಚಮಸಾಲಿ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಹೋದ್ಯೋಗಿಗಳು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಬಳಿಕ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಮುಖಂಡರಾದ ಮಧುರಚನ್ನಶಾಸ್ತ್ರಿ, ಬಸವರಾಜ, ಜಗದೀಶ್, ಬಿ.ಬಸವರಾಜ, ಜವಳಿ ಲೇಪಾಕ್ಷಿ, ನೂರಾರು ಸಮಾಜದ ಮುಖಂಡರು, ಯುವಕರು ಭಾಗವಹಿಸಿದ್ದರು.ಪಂಚಮಸಾಲಿ ೨ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ, ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯ ಯುವ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.