ಸಾರಾಂಶ
ಜಿಲ್ಲಾಧಿಕಾರಿ ನಿವಾಸದ ಮುಂಭಾಗ, ಮದಕರಿನಾಯಕ ವೃತ್ತ, ತಹಸೀಲ್ದಾರ್ ಕಚೇರಿ, ಪಿಎಲ್ ಡಿ ಬ್ಯಾಂಕ್ ಬಳಿ ಪೊಲೀಸರು ಬ್ಯಾರಿಕೇಡ್ ಇಟ್ಟಿದ್ದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಹಿನ್ನೆಲೆ ಬೆಳಗ್ಗೆಯಿಂದಲೇ ಪೊಲೀಸರು ಭಾರೀ ಪ್ರಮಾಣದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ನಾಲ್ಕು ಮಾರ್ಗಗಳಿಗೆ ಬ್ಯಾರಿಕೇಡ್ ಇಟ್ಟು ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ಮಧ್ಯಾಹ್ನ ಎರಡು ಗಂಟೆವರೆಗೆ ಕಾರ್ಯನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಹೋಗುವವರು ತೊಂದರೆ ಅನುಭವಿಸಬೇಕಾಯಿತು. ಡಿಸಿ ಕಚೇರಿಗೆ ಹೋಗುವ ನೌಕರರು, ಸಿಬ್ಬಂದಿ ಕೂಡಾ ಪೊಲೀಸ್ ಪಹರೆ ಬೇಧಿಸಿಕೊಂಡು ಹೋಗಲು ತ್ರಾಸು ಪಡಬೇಕಾಯಿತು.ಜಿಲ್ಲಾಧಿಕಾರಿ ನಿವಾಸದ ಮುಂಭಾಗ, ಮದಕರಿನಾಯಕ ವೃತ್ತ, ತಹಸೀಲ್ದಾರ್ ಕಚೇರಿ, ಪಿಎಲ್ ಡಿ ಬ್ಯಾಂಕ್ ಬಳಿ ಪೊಲೀಸರು ಬ್ಯಾರಿಕೇಡ್ ಇಟ್ಟಿದ್ದರು. ಬೆಳಗ್ಗೆಯಿಂದಲೇ ಒನಕೆ ಓಬವ್ವ ವೃತ್ತದ ಸುತ್ತಲೂ ಬ್ಯಾರಿಕೇಡ್‍ಗಳನ್ನಿಟ್ಟು ಪೊಲೀಸರು ಸರ್ಪಗಾವಲಾಗಿ ನಿಂತಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವವರನ್ನು ತಡೆದು ಪ್ರಶ್ನಿಸಿ ಹಿಂದಕ್ಕೆ ಕಳಿಸುತ್ತಿದ್ದರು. ಇಷ್ಟೆಲ್ಲದರ ನಡುವೆ ಕೆಲವರು ಚಾಲುಕ್ಯ ಹೋಟೆಲ್ ಮುಂಭಾಗ ಟೈರ್‌ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಮದಕರಿನಾಯಕ ಪ್ರತಿಮೆ ಮುಂಭಾಗದಿಂದ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಧಾವಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಇಪ್ಪತ್ತು ನಿಮಿಷಗಳಿಗೂ ಹೆಚ್ಚು ಕಾಲ ನೂಕಾಟ, ತಳ್ಳಾಟವಾಯಿತು. ಹಗ್ಗ ಹಾಗೂ ತೋಳ್ಬಲದ ಶಕ್ತಿಯನ್ನೆಲ್ಲಾ ಬಳಸಿದ ಪೊಲೀಸರು ಪ್ರತಿಭಟನಾಕಾರರ ಹಿಮ್ಮೆಟ್ಟಿಸಿದರು. ಇದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಎಂ.ಚಂದ್ರಪ್ಪ ಬ್ಯಾರಿಕೇಡ್ ಹತ್ತಿ ಒಳ ನುಗ್ಗಲು ಯತ್ನಿಸಿದರಾದರೂ ಪೊಲೀಸರು ಅವಕಾಶ ಕೊಡಲಿಲ್ಲ. ಪ್ರತಿಭಟನಾಕಾರರ ಬಂಧಿಸಿ ಕರೆದೊಯ್ಯಲು ನಾಲ್ಕು ಕೆಎಸ್‌ಆಟಿಸಿ ಬಸ್ಸುಗಳನ್ನು ಪೊಲೀಸರು ತಂದಿದ್ದರು. ಇದಲ್ಲದೇ ಐದಕ್ಕೂ ಹೆಚ್ಚು ಪೊಲೀಸ್ ವ್ಯಾನ್ , ಅಗ್ನಿಶಾಮಕ ವಾಹನಗಳು ಬಿಗಿ ಬಂದೋ ಬಸ್ತ್ ನಲ್ಲಿ ಗೋಚರಿಸಿದವು