ನೇಪಾಳದಲ್ಲಿದ್ದುಕೊಂಡು ಭಾರತೀಯರನ್ನು ಟಾರ್ಗೆಟ್ ಮಾಡಿ ಜಾಲತಾಣಗಳ ಮೂಲಕ ಹೂಡಿಕೆಯ ಆಮಿಷವೊಡ್ಡಿ ನೂರಾರು ಕೋಟಿ ರು. ವಂಚನೆ ಮಾಡಿದ ತಂಡವನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ

ಮಂಗಳೂರು: ನೇಪಾಳದಲ್ಲಿದ್ದುಕೊಂಡು ಭಾರತೀಯರನ್ನು ಟಾರ್ಗೆಟ್ ಮಾಡಿ ಜಾಲತಾಣಗಳ ಮೂಲಕ ಹೂಡಿಕೆಯ ಆಮಿಷವೊಡ್ಡಿ ನೂರಾರು ಕೋಟಿ ರು. ವಂಚನೆ ಮಾಡಿದ ತಂಡವನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ.ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾದ ವಂಚಕರಿದ್ದು, ನೇಪಾಳ ಪೊಲೀಸರು ಚೀನಾದ ವಂಚಕರನ್ನು ಬಂಧಿಸಿದ್ದಾರೆ. 5 ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಗುಜರಾತ್‌ ಬಾವಾನಗರ್‌ ಜಿಲ್ಲೆಯ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳ ಸರಂಜಿತ್‌ ಕೊಲ್ಲತ್ತಾ ನಿವಾಸಿ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್‌ನ ಸಿಂಗಬುಮ್‌ ಜಿಲ್ಲೆಯ ಪುಪ್ಲ ಶಿವ ಕುಮಾರ್ ರಾವ್ (32), ಉತ್ತರ ಪ್ರದೇಶ ಮಾವೋ ಜಿಲ್ಲೆಯ ಗೌರವ್ ಪಾಂಡೆ (24), ಸುಲ್ತಾನ್‌ಪುರ್‌ ಜಿಲ್ಲೆಯ ಹರ್ಷ್ ಮಿಸ್ರಾ (22), ಜಾರ್ಖಂಡ್‌ ಡಿಯೋಗರ್‌ ಜಿಲ್ಲೆಯ ರಾಜೇಶ್ ಮಂಡನ್ (30), ಉತ್ತರ ಪ್ರದೇಶ ಲಕ್ನೋ ನಿವಾಸಿ ಮೊಹಮ್ಮದ್ ಆಕೀಬ್ ಅಲಿ (27), ಬಿಹಾರದ ನಳಂದ ಜಿಲ್ಲೆಯ ರಾಜೀವ್ ರಂಜನ್ ಕುಮಾರ್ (30), ಜಾರ್ಖಂಡ್‌ ಸಿಂಗಬುಮ್‌ ಜಿಲ್ಲೆಯ ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶ ಝಾನ್ಸಿ ಜಿಲ್ಲೆಯ ನೌಶಾದ್ ಅಲಿ (34), ರಾಜಸ್ತಾನ ಜೈಪುರದ ಓಂ ಪ್ರಕಾಶ್ ಯಾದವ್ (37) ಬಂಧಿತರು. ಇವರಿಂದ 1 ಲ್ಯಾಪ್‌ಟಾಪ್‌, 21 ಮೊಬೈಲ್‌ ಫೋನ್‌ಗಳು, 20 ವಿವಿಧ ಕಂಪೆನಿಯ ಸಿಮ್‌ಕಾರ್ಡ್‌ಗಳು, 20 ಬೇರೆ ಬೇರೆ ಬ್ಯಾಂಕ್ ಡೆಬಿಟ್ ಕ್ರೆಡಿಟ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

624 ಬ್ಯಾಂಕ್‌ ಖಾತೆ ವಿವರ!:

ಆರೋಪಿಗಳ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಪರಿಶೀಲಿಸಿದಾಗ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡುಬಂದಿವೆ. ಈ ಬ್ಯಾಂಕ್ ಖಾತೆಗಳ ಮೇಲೆ ಒಟ್ಟು 4,580ಕ್ಕೂ ಹೆಚ್ಚು ಪ್ರಕರಣಗಳು ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ದಾಖಲಾಗಿವೆ. ಈ ಪೈಕಿ ಒಂದು ಬ್ಯಾಂಕ್ ಖಾತೆಯಲ್ಲಿ 167 ಕೋಟಿ ರು. ಹಣ ವರ್ಗಾವಣೆಯಾಗಿದೆ. ಮಂಗಳೂರು ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ವಂಚಕರು ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು 30,70,26,725 ರು. ಹಣ ವರ್ಗಾವಣೆ ಆಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರ ಪಡೆಯಬೇಕಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದರು.ಸಿಕ್ಕಿಬಿದ್ದದ್ದು ಹೇಗೆ?:

ಮಂಗಳೂರು ಸೆನ್ ಕ್ರೈಂ ಠಾಣೆಯಲ್ಲಿ ನಾಗರಿಕರೊಬ್ಬರಿಂದ 1.38 ಕೋಟಿ ರು. ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ ಪ್ರಕರಣ ಕೆಲ ದಿನಗಳ ಹಿಂದೆ ನಡೆದಿತ್ತು. ಈ ಪ್ರಕರಣದ ವಂಚಕರು ನೇಪಾಳದಲ್ಲಿ ಕುಳಿತು ವಂಚನೆ ಮಾಡುತ್ತಿದ್ದುದನ್ನು ತಾಂತ್ರಿಕ ವಿಶ್ಲೇಷಣೆಯಿಂದ ಪತ್ತೆ ಹಚ್ಚಿದ ಪೊಲೀಸರು ವಂಚಕರ ಗ್ಯಾಂಗ್‌ನ್ನು ಪತ್ತೆ ಹಚ್ಚಿದ್ದಾರೆ.

ವಂಚಕರ ಒಂದು ತಂಡವು ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್‌ಗಳನ್ನು ನೇಮಕ ಮಾಡಿಕೊಂಡು, ವಂಚನೆಯ ಹಣ ವರ್ಗಾವಣೆ ಮಾಡುವುದು ಹಾಗೂ ಹಣವನ್ನು ಯುಎಸ್‌ಡಿಟಿಯಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಾರೆ. ಇನ್ನೊಂದು ತಂಡವು ಕಾಂಬೋಡಿಯಾ ಮತ್ತು ಇತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ, ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹಣ ಗಳಿಸುವ ಆಮಿಷವೊಡ್ಡಿ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸುವ ದಂಧೆ ನಡೆಸುತ್ತಿದ್ದರು. ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.

ಸೆನ್ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ (1.38 ಕೋಟಿ ರು. ವಂಚನೆ) ವಂಚಕರು ವಂಚನೆಗೆ ಉಪಯೋಗಿಸಲು ಫಿರ್ಯಾದಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ಸುಮಾರು 128 ಪ್ರಕರಣಗಳು ಮತ್ತು ಒಟ್ಟು 36 ಎಫ್‌ಐಆರ್‌ ದಾಖಲಾಗಿರುವುದು ಕಂಡುಬಂದಿದೆ.ಬ್ಯಾಂಕ್ ಖಾತೆಗಳನ್ನು ಹೇಗೆ ಪಡೆಯುತ್ತಾರೆ?

ವಂಚಕರು ಬೇರೆ ಬೇರೆ ಕಂಪೆನಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ ಜಾಹೀರಾತು ನೀಡಿ ಕಾರ್ಪೊರೇಟ್ ಖಾತೆಗಳು, ಕರೆಂಟ್ ಖಾತೆಗಳು, ಯುಎಸ್‌ಡಿಟಿ ಟು ಐಎನ್‌ಆರ್‌ ಎಕ್ಸ್‌ಚೇಂಜ್‌, ಮ್ಯಾನೇಜ್‌ಮೆಂಟ್‌ ಆಪರೇಟರ್‌ಗಳು ಮತ್ತು ಒಟಿಪಿ ವರ್ಕರ್ಸ್‌ ಬೇಕಾಗಿದ್ದಾರೆ ಎಂಬುದಾಗಿ ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸುತ್ತಾರೆ. ಇದನ್ನು ನೋಡಿ ದುರಾಸೆಗೆ ಒಳಗಾದವರು ಅವರನ್ನು ಸಂಪರ್ಕಿಸಿದಾಗ ಶೇ.5ರಿಂದ ಶೇ.10 ಕಮಿಷನ್ ಕೊಡುವುದಾಗಿ ಮತ್ತು ವಿವಿಧ ರೀತಿಯ ಆಮಿಷ ಒಡ್ಡಿ ದುಬೈ, ನೇಪಾಳ ಮುಂತಾದ ಕಡೆ ಕರೆಸಿಕೊಳ್ಳುತ್ತಾರೆ. ಬಳಿಕ ವಂಚಕರು ತಮಗೆ ಸೇರಿದ ಮೊಬೈಲ್ ಫೋನ್‌ಗಳಿಗೆ ಖಾತೆದಾರರ ಸಿಮ್ ಹಾಕಿಕೊಂಡು ನೆಟ್‌ ಬ್ಯಾಂಕಿಂಗ್‌ ಮುಖಾಂತರ ವಂಚನೆಯ ಹಣವನ್ನು ತಮಗೆ ಬೇಕಾದ ರೀತಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಪ್ರತಿದಿನ ವಿದೇಶದಲ್ಲಿನ ಆರೋಪಿತರಿಗೆ ಹಣ ವರ್ಗಾವಣೆ ಮಾಡುತ್ತಾರೆ.

------------

ಬಾಕ್ಸ್‌-2

ಡಿಜಿಟಲ್ ಸ್ಲೇವರಿ ಬಗ್ಗೆ ಇರಲಿ ಎಚ್ಚರ

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ 6 ಜನರನ್ನು ವಿದೇಶದಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅವರನ್ನು ಸೈಬರ್ ಸ್ಲೇವರಿ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಆರೂ ಮಂದಿಯನ್ನು ರಕ್ಷಿಸಲಾಗಿದ್ದು, ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕಮಿಷನರ್‌ ಸುಧೀರ್‌ ರೆಡ್ಡಿ ತಿಳಿಸಿದರು.

ವಿದೇಶಗಳಲ್ಲಿ ಕೆಲಸ ಹುಡುಕುತ್ತಿರುವ ಯುವಕರಿಗೆ ನಕಲಿ ಜಾಹಿರಾತುಗಳು, ಏಜೆಂಟ್‌ಗಳ ಮೂಲಕ ಪುಸಲಾಯಿಸಿ ಅವರನ್ನು ಟೂರಿಸ್ಟ್ ವೀಸಾದಲ್ಲಿ ಮಧ್ಯ ಪ್ರಾಚ್ಯ ದೇಶಗಳಿಗೆ ಕರೆದುಕೊಂಡು ಹೋಗಿ ಅವರಿಂದ ದಾಖಲೆಗಳು, ಪಾಸ್‌ಪೋರ್ಟ್ ವಶಪಡಿಸಿ ಅಜ್ಞಾತ ಸ್ಥಳದಲ್ಲಿ ಬಂಧಿಸುತ್ತಾರೆ. ಅವರಿಂದ ಒತ್ತಾಯ ಪೂರಕವಾಗಿ ಮುಗ್ಧ ಹೂಡಿಕೆದಾರರಿಗೆ ಅವರ ಮಾತೃ ಭಾಷೆಯಲ್ಲೇ ಮಾತನಾಡಿಸಿ, ಪುಸಲಾಯಿಸಿ ಹಣ ವರ್ಗಾಯಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ- ಉಪಹಾರ ನೀಡದೆ, ಕುಟುಂಬದವರನ್ನು ಸಂಪರ್ಕಿಸಲು ಅವಕಾಶ ಕೊಡದೆ ಕೂಡಿ ಹಾಕಿ ಭಾರತದ ನಾಗರಿಕರನ್ನು ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದಾರೆ. ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರಬೇಕು.

ವಿದೇಶಗಳಿಗೆ ಏಜೆನ್ಸಿ ಮೂಲಕ ಹೋಗುವ ಯುವಕರು ಪ್ರೊಟೆಕ್ಟ್ಸ್ ಆಫ್ ಇಮಿಗ್ರೇಟ್ಸ್ ಬಳಿ ನೋಂದಣಿ ಆಗಿರುವ ಏಜೆನ್ಸಿ ಬಗ್ಗೆ ಸರಿಯಾದ ಮಾಹಿತಿ ಪಡೆದು ಅವರ ಮೂಲಕವಷ್ಟೇ ಕೆಲಸ ಪಡೆದು, ಪರಿಶೀಲಿಸಿ ಉದ್ಯೋಗಕ್ಕೆ ತೆರಳುವುದು ಉತ್ತಮ ಎಂದು ಕಮಿಷನರ್‌ ತಿಳಿಸಿದರು.