ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಮಕ್ಕಳ ರಕ್ಷಣೆಗಾಗಿ ಇರುವ ಕಾಯ್ದೆ, ನಿಯಮಗಳ ಕುರಿತು ತಿಳುವಳಿಕೆ ಮೂಡಿಸಲು ಪೊಲೀಸ್ ಅಧಿಕಾರಿಗಳು ವಾರಕ್ಕೊಮ್ಮೆ ತೆರೆದ ಮನೆ ಕಾರ್ಯಕ್ರಮ ನಡೆಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ ನೀಡಿದರು.ಅವರು ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಾದ ಭಾಗೀದಾರ ಇಲಾಖೆಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆ ಮತ್ತು ಹತ್ತಿರದ ಪೊಲೀಸ್ ಠಾಣೆ ನಡುವಿನ ಸಂಪರ್ಕ ಬಲಗೊಳ್ಳಬೇಕು. ಇದರಿಂದ ಎಷ್ಟೋ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಪೊಲೀಸ್ ಅಧಿಕಾರಿಗಳು ಮೇಲಿಂದ ಮೇಲೆ ಶಾಲೆಗೆ ಭೇಟಿ ನೀಡಲಾರಂಭಿಸಿದರೆ ಪುಂಡ ಪೋಕರಿಗಳು ಶಾಲೆ ಅಕ್ಕಪಕ್ಕ ಸುಳಿಯುವುದಿಲ್ಲ ಎಂದು ಅಧ್ಯಕ್ಷರು ಹೇಳಿದರು.
ಜಿಲ್ಲೆಯಲ್ಲಿ 167 ಪ್ರೌಢ ಶಾಲೆಗಳಿದ್ದು ಎಲ್ಲ ಶಾಲೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಸಬೇಕು. ಶಾಲೆಗಳು ತುಂಬಾ ದೂರ ಇದ್ದಲ್ಲಿ ಪೊಲಿಸ್ ಅಧಿಕಾರಿಗಳೇ ಶಾಲೆಗೆ ಹೋಗಿ ಕಾನೂನು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ಪೋಕ್ಸೋ ಸೇರಿ ಮಕ್ಕಳ ರಕ್ಷಣೆಗಾಗಿ ಇರುವ ಕಾಯ್ದೆಗಳ ಕುರಿತು ಮಾಹಿತಿ ನೀಡಬೇಕು. ರಕ್ಷಣೆಗಾಗಿ ಇರುವ ಕಾಯ್ದೆಗಳ ಮಾಹಿತಿ ಇದ್ದಲ್ಲಿ ಮಕ್ಕಳು ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ಧೈರ್ಯದಿಂದ ದೂರು ನೀಡಬಲ್ಲರು ಎಂದರು.
ಜಿಲ್ಲೆಯಲ್ಲಿ ಮಕ್ಕಳ ಸಾಗಾಣಿಕೆ ಪ್ರಕರಣ ಇಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಮಕ್ಕಳ ನಾಪತ್ತೆ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಪತ್ತೆಯಾದ ಮಕ್ಕಳನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ, ನಾಪತ್ತೆ ಹಿಂದಿನ ಕಾರಣ ಗುರುತಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಆಯೋಗದ ಸದಸ್ಯರು ತಿಳಿಸಿದರು.ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತಿವೆ. ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯಾದ ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಭಾಗೀದಾರ ಇಲಾಖೆಗಳ ಜವಾಬ್ದಾರಿ ಹೆಚ್ಚಿದೆ. ಶಿಕ್ಷಣ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿ ಸಂಬಂಧಿಸಿದ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮನ್ವಯ ಸಮಿತಿ ರಚಿಸಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಖಾಸಗಿ ಶಾಲಾ ವಾಹನಗಳು ಸುಸ್ಥಿತಿಯಲ್ಲಿರುವುದನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಬಸ್ ಇರುವ ಎಲ್ಲ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಶಾಲಾ ಬಸ್‌ನಲ್ಲಿ ಆಯಾ ಸಹ ಇರಬೇಕು ಎಂಬ ನಿಯಮ ಪಾಲನೆಯಾಗಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.ಕಪಲಾಪುರ ಗ್ರಾಮದ ವಸತಿ ಶಾಲೆಗೆ ಭೇಟಿ ನೀಡಿದಾಗ ಹಲವು ಸಮಸ್ಯೆ, ಕೊರತೆಗಳು ಕಂಡು ಬಂದಿದ್ದವು ಎಂದು ಕೋಸಂಬೆ ಬೇಸರ ವ್ಯಕ್ತಪಡಿಸಿ ಹೆಚ್ಚಿನ ಪ್ರಕರಣಗಳಲ್ಲಿ ಆಯೋಗದ ಸೂಚನೆ ನಂತರವೇ ಅಧಿಕಾರಿಗಳು ಎಚ್ಚತ್ತುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಅಧಿಕಾರಿಗಳು ತಮ್ಮ ಪಾಲಿನ ಕರ್ತವ್ಯ ಸರಿಯಾಗಿ ನಿಭಾಯಿಸಬೇಕೆಂದರು.
ಮಕ್ಕಳ ಅಪೌಷ್ಟಿಕತೆ, ಶಾಲೆ ಬಿಡುವ ಮಕ್ಕಳ ಸಮಸ್ಯೆ, ಬಾಲ ಕಾರ್ಮಿಕರ ಸಮಸ್ಯೆ, ಬಾಲ್ಯ ವಿವಾಹ ಮುಂತಾದ ವಿಷಯಗಳನ್ನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಪ್ರಸ್ತಾಪಿಸಿದರು. ಮಕ್ಕಳಿಗೆ ಸಂಬಂಧಿಸಿದ ಕಾನೂನು ಅನುಷ್ಠಾನ ಕುರಿತು ಇಲಾಖಾವಾರು ಚರ್ಚೆಯೂ ನಡೆಯಿತು.ಆಯೋಗದ ಸದಸ್ಯರು, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.