ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರ ಸೇರಿದಂತೆ ಜಿಲ್ಲೆಯ ನಾನಾ ಪರೀಕ್ಷಾ ಕ್ಷೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಭಾನುವಾರ ನಡೆದ ಲಿಖಿತ ಪರೀಕ್ಷೆಗೆ ಜಿಲ್ಲೆಯಲ್ಲಿ 1,574 ಅಭ್ಯರ್ಥಿಗಳು ಗೈರಾಗಿದ್ದರು. ಬೆಳಗಾವಿ ನಗರದಲ್ಲಿ 46 ಕೇಂದ್ರ, ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ 15 ಕೇಂದ್ರ ಸೇರಿ ಒಟ್ಟು 61 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ಜಿಲ್ಲೆಯಲ್ಲಿ 25,164 ಅಭ್ಯರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದರು.

ಈ ಪೈಕಿ ಬೆಳಗಾವಿ ವಿಭಾದಲ್ಲಿ 18,751 ಅಭ್ಯರ್ಥಿಗಳು ಹಾಗೂ ಚಿಕ್ಕೋಡಿ ವಿಭಾಗದಲ್ಲಿ 4,839 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸುತ್ತಿದ್ದಂತೆ ಗೇಟ್ ಬಳಿಯ ಪೊಲೀಸರು ಹಾಗೂ ಪರೀಕ್ಷಾ ಕರ್ತವ್ಯದ ಸಿಬ್ಬಂದಿ, ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಒಳಗಡೆ ಬಿಟ್ಟರು.

ಪರೀಕ್ಷೆಗಳ ಹಿನ್ನಲೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇರಿಸಲಾಗಿದ್ದ ಬೆಳಗಾವಿ ನಗರದ ವಿಶ್ವೇಶ್ವರಯ್ಯ ನಗರದ ಜಿಲ್ಲಾ ಖಜಾನೆ ಕಾರ್ಯಾಲಯವನ್ನು ಜಿಲ್ಲಾಕಾರಿಗಳ ಸಮ್ಮುಖದಲ್ಲೇ ತೆರೆದು ೧೫ಕ್ಕೂ ಅಧಿಕ ವಾಹನಗಳಲ್ಲಿ ಆಯಾ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಕಾರಿ ಮೊಹಮ್ಮದ್ ರೋಷನ್, ಜಿಲ್ಲೆಯಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಪರೀಕ್ಷೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಯಾವುದೇ ಲೋಪದೋಷ ಆಗದಂತೆ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದ್ದರು. ಆ ಪ್ರಕಾರ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ವಾಹನಕ್ಕೆ ಜಿಪಿಎಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಯಾವುದೇ ಲೋಪ ಆಗದಂತೆ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು ಎಂದು ತಿಳಿಸಿದರು.


ಈ ವೇಳೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎಂ.ಕಾಂಬಳೆ ಸೇರಿ ಮತ್ತಿತರರು ಹಾಜರಿದ್ದರು.