ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ, ಚಾಲಕನಿಗೆ ಚಾಕು ತೋರಿಸಿ ಹಣ ಹಾಗೂ ಮೊಬೈಲ್ ದೋಚಿರುವ ಘಟನೆ ನಡೆದಿದ್ದು, ಬಂಕಾಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಕಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ, ಚಾಲಕನಿಗೆ ಚಾಕು ತೋರಿಸಿ ಹಣ ಹಾಗೂ ಮೊಬೈಲ್ ದೋಚಿರುವ ಘಟನೆ ನಡೆದಿದ್ದು, ಬಂಕಾಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆ.22ರಂದು ಬೆಳಗಿನ ಜಾವ 3.30ರ ಸುಮಾರಿಗೆ ಬಂಕಾಪುರ ಸಮೀಪದ ಪಂಚವಟಿ ಹೋಟೆಲ್ ಎದುರು ಲಾರಿ ಚಾಲಕನನ್ನು ಅಡ್ಡಗಟ್ಟಿದ ಆರೋಪಿಗಳು ಚಾಕು ತೋರಿಸಿ ಬೆದರಿಕೆ ಹಾಕಿ, ಆತನ ಬಳಿಯಿದ್ದ 4,700 ರು. ನಗದು ಹಾಗೂ 18 ಸಾವಿರ ಮೌಲ್ಯದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಉಬೇದವುಲ್ಲಾಖಾನ್ ಕಿತ್ತೂರು (26), ದಾವಲಸಾಬ್ ಚೋಪದಾರ್ (26) ಹಾಗೂ ಅಲ್ತಾಫ್ ಗಂಜಿಗಟ್ಟಿ (25) ಎಂಬುವರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಾದ ಮೊಹಮ್ಮದ್ ಸೊಫಿಯಾನ್ ಹಾಗೂ ಆಯಾಜ್ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 5 ಲಕ್ಷ ರು. ಮೌಲ್ಯದ ಕಾರು ಹಾಗೂ ಕಳುವಾಗಿದ್ದ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಕಾರ್ಯಾಚರಣೆಯನ್ನು ಎಸ್ಪಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ ಹಾಗೂ ಶಿಗ್ಗಾಂವಿ ಡಿವೈಎಸ್ಪಿ ಗುರುಶಾಂತಪ್ಪ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಸಿಪಿಐ ಅನಿಲ್‌ಕುಮಾರ ರಾಠೋಡ್ ಹಾಗೂ ಪಿಎಸ್‌ಐ ಮಂಜುನಾಥ ಎಸ್. ಕುರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಪ್ರಕರಣದ ಪತ್ತೆ ಕಾರ್ಯದಲ್ಲಿ ಬಂಕಾಪುರ ಠಾಣೆಯ ಪಿಎಸ್‌ಐಗಳಾದ ಶ್ರೀಶೈಲ ಕೆಂಚಣ್ಣನವರ, ಕ್ರೈಂ ಸಿಬ್ಬಂದಿ ವೆಂಕಟೇಶ ಲಮಾಣಿ, ಗೋವಿಂದ ಲಮಾಣಿ, ತನಿಖಾ ಸಹಾಯಕರಾದ ಕೆ.ರಜನಿ, ಮಾಲತೇಶ ಜಾವೋಜಿ, ನಿಂಗಪ್ಪ ಪೂಜಾರ, ಬೀರಪ್ಪ ಕಳ್ಳಿಮನಿ, ಶಂಭು ಯಲಿವಾಳ, ಜಿ.ಎನ್ ಹರಿಜನ, ಎಸ್.ಎ ಸಗ್ಗಮ್ಮನವರ, ಗುಡ್ಡಪ್ಪ ಛಲವಾದಿ, ಮಾರುತಿ ಹಾಲಭಾವಿ, ಸತೀಶ ಮಾರುಕಟ್ಟೆ ಪಾಲ್ಗೊಂಡಿದ್ದರು.