ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ಪತ್ತೆಯಾಗುವ ಗುರುತು ಸಿಗದ ಮೃತದೇಹಗಳು ಮತ್ತು ಅಸ್ವಾಭಾವಿಕ ಸಾವುಗಳ ಪ್ರಕರಣ ನಿಯಮಿತವಾಗಿ ಪರಿಶೀಲಿಸಬೇಕು.
ಬಳ್ಳಾರಿ: ಜಿಲ್ಲೆಯಲ್ಲಿ ದಾಖಲಾಗಿರುವ ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನದ ಸಮರ್ಥ ಬಳಕೆ ಹಾಗೂ ಗುರುತು ಪತ್ತೆಯಾಗದ ಶವಗಳ ಕಡ್ಡಾಯ ಪರಿಶೀಲನೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾಣೆಯಾದ ಮಕ್ಕಳ ಪತ್ತೆ ಹಚ್ಚುವಿಕೆಯ ವಿಶೇಷ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ನಾಪತ್ತೆ ಪ್ರಕರಣ ಆದ್ಯತೆಯ ಮೇರೆಗೆ ತನಿಖೆ ನಡೆಸಿ ಶೀಘ್ರ ಪತ್ತೆ ಹಚ್ಚುವಂತೆ ನಿರ್ದೇಶಿಸಿದರು.ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ಪತ್ತೆಯಾಗುವ ಗುರುತು ಸಿಗದ ಮೃತದೇಹಗಳು ಮತ್ತು ಅಸ್ವಾಭಾವಿಕ ಸಾವುಗಳ ಪ್ರಕರಣ ನಿಯಮಿತವಾಗಿ ಪರಿಶೀಲಿಸಬೇಕು. ಕಾಣೆಯಾದ ಮಕ್ಕಳ ವಿವರಗಳೊಂದಿಗೆ ಯುಡಿಆರ್ ದಾಖಲೆ ಕ್ರಾಸ್-ವೆರಿಫೈ ನಡೆಸಿ ತನಿಖೆ ಚುರುಕುಗೊಳಿಸಬೇಕು. ತನಿಖಾ ಪ್ರಕ್ರಿಯೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಲೊಕೇಶನ್ ಟ್ರ್ಯಾಕಿಂಗ್ ಹಾಗೂ ಮುಖಚಹರೆ ಗುರುತಿಸುವ ಸುಧಾರಿತ ತಂತ್ರಜ್ಞಾನ ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದರು.
ಪೊಲೀಸ್ ಠಾಣಾ ಮಟ್ಟದಲ್ಲಿ ಮೇಲ್ವಿಚಾರಣೆ: ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಣೆಯಾದ ಮಕ್ಕಳ ಪ್ರಕರಣಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ತ್ವರಿತವಾಗಿ ಕುಟುಂಬದವರೊಂದಿಗೆ ಮರುಸಂಪರ್ಕ ಕಲ್ಪಿಸಲು ವಿಶೇಷ ಗಮನ ಹರಿಸಬೇಕು. ಮಕ್ಕಳ ಸುರಕ್ಷತೆ ಪೊಲೀಸ್ ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ಯಾವುದೇ ನಿರ್ಲಕ್ಷ್ಯಕ್ಕೆ ಆಸ್ಪದ ನೀಡದೆ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಮಕ್ಕಳು ಬೆಳೆದಂತೆ ಅವರ ಮುಖಚರ್ಯೆಯಲ್ಲಿ ಉಂಟಾಗುವ ಬದಲಾವಣೆ ಗುರುತಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಾಪ್ಟ್‌ವೇರ್ ನೆರವು ಪಡೆಯಬಹುದು. ಕೆನಾಲ್ ಅಥವಾ ಡ್ಯಾಂನ ಕೆಳಹಂತದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಗುರುತು ಪತ್ತೆಯಾಗದ ಮೃತದೇಹಗಳ ವಿವರ ಕಡ್ಡಾಯವಾಗಿ ತಾಳೆ ಮಾಡಿ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.ಹೊಸ ಪ್ರಕರಣಗಳ ಜತೆಗೆ ಹಳೆಯ ಬಾಕಿ ಉಳಿದಿರುವ ಪ್ರಕರಣ ಮೇಲೂ ನಿರಂತರ ನಿಗಾ ಇರಿಸಿ ಪೋಷಕರೊಂದಿಗೆ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಜಾಗೃತಿ: ಅಕ್ಕ ಪಡೆಯ ತಂಡಗಳು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸ್ಪಷ್ಟ ದಿನಚರಿ ರೂಪಿಸಿ ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಒಂದು ದಿನ ಹಾಗೂ ಗ್ರಾಮಾಂತರ/ ಹೊರವಲಯದಲ್ಲಿ ಮತ್ತೊಂದು ದಿನ ನಿರಂತರವಾಗಿ ಭೇಟಿ ನೀಡಿ ಕಣ್ಗಾವಲು ಇಡಬೇಕು. ಮೆನೆ ಬಿಟ್ಟು ಬರುವ ಅಥವಾ ನಾಪತ್ತೆಯಾಗಿ ರೈಲುಗಳಲ್ಲಿ ಬರುವ ಮಕ್ಕಳನ್ನು ಪತ್ತೆ ಹಚ್ಚಲು ರೈಲ್ವೆ ಇಲಾಖೆಯ ಸಹಕಾರ ಪಡೆಯಬೇಕು. ಸಿಸಿ ಟಿವಿ ಕ್ಯಾಮೆರಾ ಮೇಲೆ ನಿಗಾ ವಹಿಸಬೇಕು. ರಕ್ಷಿಸಿದ ಮಕ್ಕಳನ್ನು ನಿಯಮಾನುಸಾರ ಸಿಡಬ್ಯ್ಲೂಸಿ ಮುಂದೆ ಹಾಜರುಪಡಿಸಬೇಕು ಎಂದು ಸೂಚಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಬಾಲ್ಯವಿವಾಹ, ಪೋಕ್ಸೊ ಕಾಯ್ದೆ, ಡ್ರಗ್ಸ್, ಸೈಬರ್ ವಂಚನೆ ಹಾಗೂ ಮಹಿಳಾ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಮಹಿಳಾ ಪೊಲೀಸ್ ಠಾಣೆಯ ಸಿಪಿಐ ರಮೇಶ್ ಕುಲಕರ್ಣಿ, ಎಸ್ ಜೆಪಿಯು ಘಟಕದ ಲಲಿತ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಂದಿನಿ ಶಿಂಧೆ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವೆಂಕಟೇಶ್ ಚೆಟ್ಲ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರೈಲ್ವೇ ಪೊಲೀಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ‘ಅಕ್ಕ ಪಡೆ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅನಾಥ, ಸಂಕಷ್ಟದಲ್ಲಿರುವ ಹಾಗೂ ಕುಟುಂಬದ ಆಸರೆ ಕಳೆದುಕೊಂಡ ಮಕ್ಕಳಿಗೆ ಸುರಕ್ಷಿತ ಕೌಟುಂಬಿಕ ವಾತಾವರಣ ಒದಗಿಸುವ ಮಹತ್ವ ಸಾರುವ ಪೋಷಕತ್ವ ಜಾಗೃತಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.