ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಗ್ಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆಯ ಈ-ಮೇಲ್ ಬಂದಿದ್ದು, ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಗ್ಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆಯ ಈ-ಮೇಲ್ ಬಂದಿದ್ದು, ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ.

ತಮಿಳರು ಹಾಗೂ ಪಾಕಿಸ್ತಾನಿಗಳ ಸೇಡು, ತಹಶೀಲ್ದಾರ್ ಕಚೇರಿಯಲ್ಲಿ ಶೀಘ್ರದಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ. ಎಲ್ಲರನ್ನೂ ತಕ್ಷಣ ತೆರವುಗೊಳಿಸಿ ಎಂಬ ಶೀರ್ಷಿಕೆಯನ್ನು ಕನ್ನಡದಲ್ಲಿ ಉಲ್ಲೇಖಿಸಿ, ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ ಎಂಬ ಈ ಮೇಲ್ ಐಡಿಯಿಂದ ಬೆಳಗ್ಗೆ ೭.೨೫ರ ಸುಮಾರಿಗೆ ದುಷ್ಕರ್ಮಿಯೊಬ್ಬನು ಸಂದೇಶ ರವಾನಿಸಿದ್ದಾನೆ. ಬಾಂಬ್ ಸ್ಫೋಟದ ಬೆದರಿಕೆಯೊಂದಿಗೆ, ಇಮೇಲ್ ಬಾಡಿಯಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನೂ ಉಲ್ಲೇಖಿಸಲಾಗಿದೆ. ೨೦೦೧ರಲ್ಲಿ ಮಾಧ್ಯಮಗಳ ಮೇಲೆ ದಬ್ಬಾಳಿಕೆ ನಡೆಸಲು ಯತ್ನಿಸಲಾಗಿದೆ. ಗೆಲಿಲಿಯೋ ಎಸ್‌ಪ್ ಮೂಲಕ ಕನ್ನಡಿಗರ ಮೇಲೆ ಗೂಡಾಚಾರ ನಡೆದಿದೆ ಎನ್ನುವ ಆರೋಪಗಳನ್ನೂ ಮೇಲ್‌ನಲ್ಲಿ ಮಾಡಲಾಗಿದೆ. ಅಲ್ಲದೆ ಅನಾಥಾಶ್ರಮಗಳ ಹೆಣ್ಣುಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಗಂಭೀರ ಹಾಗೂ ಆಧಾರರಹಿತ ಆರೋಪಗಳನ್ನೂ ಒಳಗೊಂಡಿದೆ. ಈ ಬೆದರಿಕೆ ಹಿನ್ನೆಲೆ ಮಂಗಳವಾರ ತಹಶೀಲ್ದಾರ್ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಕಾರವಾರದಿಂದ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳ ಕರೆಯಿಸಿ ತಹಸೀಲ್ದಾರ ಕಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿದೆ. ಪರಿಶೀಲನೆ ಸಂದರ್ಭ ಕೆಲ ಹೊತ್ತು ತಹಸೀಲ್ದಾರ ಕಚೇರಿಗೆ ಸಾರ್ವಜನಿಕರ ಪ್ರವೇಶ ಇರಲಿಲ್ಲ. ಇದೊಂದು ಹುಸಿ ಬಾಂಬ್ ಇ-ಮೇಲ್ ಎಂದು ತಿಳಿದಿದ್ದರೂ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದು ಕಂಡು ಬಂತು. ಈ ಹಿಂದೆ ಭಟ್ಕಳ ನಗರ ಠಾಣೆಗೆ ಸಹ ಇಂತಹ ಬಾಂಬ್ ಬೆದರಿಕೆ ಬಂದಿದ್ದು, ಈ ಪ್ರಕರಣದಲ್ಲಿ ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಭಟ್ಕಳದಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.