ಸೂರಜ್‌ ರೇವಣ್ಣಗೆ ಪೊಲೀಸ್‌ ಗ್ರಿಲ್‌

| Published : Jun 23 2024, 02:09 AM IST / Updated: Jun 23 2024, 05:18 AM IST

Suraj Revanna

ಸಾರಾಂಶ

  ಹಾಸನ ‘ಸೆನ್‌’ (ಸೈಬರ್‌ಕ್ರೈಂ, ಆರ್ಥಿಕ ಅಪರಾಧ, ನಾರ್ಕೋಟಿಕ್ಸ್‌) ಪೊಲೀಸ್‌ ಠಾಣೆಯಲ್ಲಿ ಸೂರಜ್‌ ಅವರನ್ನು ಪೊಲೀಸರು ಶನಿವಾರ ಸಂಜೆಯಿಂದ ರಾತ್ರಿವರೆಗೆ 5 ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಗುರಿಪಡಿಸಿದ್ದಾರೆ.

cಹೊಳೆನರಸೀಪುರ/ಹಾಸನ :  ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್ ರೇವಣ್ಣ ಅವರ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಮರುದಿನವೇ ಆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಹಾಸನ ‘ಸೆನ್‌’ (ಸೈಬರ್‌ಕ್ರೈಂ, ಆರ್ಥಿಕ ಅಪರಾಧ, ನಾರ್ಕೋಟಿಕ್ಸ್‌) ಪೊಲೀಸ್‌ ಠಾಣೆಯಲ್ಲಿ ಸೂರಜ್‌ ಅವರನ್ನು ಪೊಲೀಸರು ಶನಿವಾರ ಸಂಜೆಯಿಂದ ರಾತ್ರಿವರೆಗೆ 5 ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಗುರಿಪಡಿಸಿದ್ದಾರೆ.

ಸೂರಜ್ ರೇವಣ್ಣ ಅವರು ತಮ್ಮ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅರಕಲಗೂಡು ಮೂಲದ ಜೆಡಿಎಸ್‌ ಕಾರ್ಯಕರ್ತರೊಬ್ಬರು ಶನಿವಾರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಸೂರಜ್‌ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ, ದೂರುದಾರನ ವಿರುದ್ಧವೇ ಬ್ಲ್ಯಾಕ್‌ ಮೇಲ್‌ ಆರೋಪದ ದೂರು ನೀಡಲು ಸೂರಜ್‌ ಬಂದಿದ್ದು, ಈ ವೇಳೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ದೂರುದಾರ ತಮ್ಮ ಬಳಿ 5 ಕೋಟಿ ರು.ಗೆ ಬೇಡಿಕೆಯಿಟ್ಟು ಕರೆ ಮಾಡಿದ್ದು, ಆ ಆಡಿಯೋ ತಮ್ಮ ಬಳಿ ಇದೆ ಎಂದು ಸೂರಜ್‌ ಆರೋಪಿಸಿದ್ದಾರೆ.

ಸೂರಜ್‌ ರೇವಣ್ಣ ಅವರ ಕಿರಿಯ ಸೋದರ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಆ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಸೂರಜ್‌ ತಂದೆ ರೇವಣ್ಣ ಅವರು ಜೈಲಿಗೂ ಹೋಗಿ ಬಂದಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮತ್ತೊಬ್ಬ ಮೊಮ್ಮಗನ ವಿರುದ್ಧ ಗಂಭೀರ ಆರಪ 

ದೂರು ದಾಖಲು:

ತಮಗಾದ ಅನೈಸರ್ಗಿಕ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೋರಿ ಐಜಿ ಹಾಗೂ ಡಿಐಜಿ ಅವರಿಗೆ ದೂರುದಾರ ಇ-ಮೇಲ್ ಮೂಲಕ ದೂರು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ, ಶನಿವಾರ ಕೃತ್ಯ ನಡೆದ ಹೊಳೆನರಸೀಪುರ ವ್ಯಾಪ್ತಿಯ ಠಾಣೆಗೆ ಆಗಮಿಸಿ ಅಧಿಕೃತವಾಗಿ ದೂರು ನೀಡಿದ್ದಾರೆ. ಮುಖಕ್ಕೆ ಮಾಸ್ಕ್‌ ಹಾಕಿಕೊಂಡು, ಬಿಳಿ ಇನ್ನೋವಾ ಕಾರಿನಲ್ಲಿ ಠಾಣೆಗೆ ಅವರು ಆಗಮಿಸಿದ್ದರು. ಈ ವೇಳೆ ಠಾಣೆ ಸುತ್ತಮುತ್ತ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು.

ಜೆಡಿಎಸ್ ಕಾರ್ಯಕರ್ತರಾಗಿದ್ದ ದೂರುದಾರ, ಡಾ.ಸೂರಜ್‌ ರೇವಣ್ಣಗೆ ಪರಿಚಿತರು. ನೌಕರಿ ಕೊಡಿಸುವಂತೆ ಕೋರಿ ಜೂ.16 ರಂದು ಸೂರಜ್‌ ರೇವಣ್ಣ ಅವರ ಗನ್ನಿಕಡ ಫಾರಂಹೌಸ್‌ಗೆ ತೆರಳಿದ್ದ ವೇಳೆ ತಮ್ಮ ಮೇಲೆ ಸೂರಜ್‌ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ಈ ಮಧ್ಯೆ, ಸೂರಜ್ ರೇವಣ್ಣ ಅವರ ಆಪ್ತ ಹನುಮನಹಳ್ಳಿಯ ಶಿವಕುಮಾರ್‌ ಎಂಬುವರು ದೂರುದಾರನೇ ವಿರುದ್ಧವೇ ಹೊಳೆನರಸೀಪುರ ಠಾಣೆಯಲ್ಲಿ ಶುಕ್ರವಾರ ಪ್ರತಿದೂರು ದಾಖಲಿಸಿದ್ದಾರೆ. 

ದೂರುದಾರ ಜೂ.16ರಂದು ತಮ್ಮ ನಾಯಕ (ಸೂರಜ್‌)ರ ಬಳಿ ಕೆಲಸ ಕೇಳಲು ಬಂದಿದ್ದರು. ಬಳಿಕ, ನಿಮ್ಮ ನಾಯಕರಿಂದ ಕೆಲಸ ಕೊಡಿಸಲು ಸಾಧ್ಯವಿಲ್ಲ. ನನಗೆ ತುಂಬಾ ಕಷ್ಟವಿದೆ ಎಂದು ಹೇಳಿ 5 ಕೋಟಿ ರು.ಗಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಶಾಸಕರ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಖುದ್ದು ಸೂರಜ್‌ ಅವರೇ ಶನಿವಾರ ಸಂಜೆ ಹಾಸನ ಪೊಲೀಸ್‌ ಠಾಣೆಗೆ ಬಂದು ದೂರುದಾರನ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.