ಸಾರಾಂಶ
ಕಾರವಾರ:
ದಲಿತ ಸಂಘಟನೆಯ ಮುಖಂಡ ಎಲಿಷಾ ಎಲಕಪಾಟಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದ, ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ಮಾರುತಿ ನಾಯ್ಕ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ನೋಟ್ ಸಿಕ್ಕಿದೆ. ಗ್ರಾಮೀಣ ಪೊಲೀಸರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿದೆ. ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಹೆಸರನ್ನು ನಮೂದಿಸಿದ್ದಾರೆ.ಕೆಲವು ದಿನಗಳ ಹಿಂದೆ ಎಲಿಷಾ ಎಲಕಪಾಟಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಪೊಲೀಸ್ ದೂರು ನೀಡಿರುವುದಕ್ಕೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನನಗೆ ತೊಂದರೆ ನೀಡುತ್ತಿದ್ದಾರೆ. ಎಲಿಷಾ ಅಧಿಕಾರಿಗಳಿಗೆ ಹಣ ಕೊಟ್ಟು ಈ ಅಧಿಕಾರಿಗಳನ್ನು ಉಪಯೋಗಿಸಿಕೊಂಡಿದ್ದಾರೆ. ಪಿಎಸ್‌ಐ ಠಾಣೆಗೆ ಕರೆಸಿ ನಿನ್ನನ್ನು ಕೊಂದುಹಾಕಿದರೂ ಕೇಳುವವರಿಲ್ಲ. ನಾನು ನಿನ್ನ ಪರವಾಗಿ ಇರುವುದಿಲ್ಲ. ನಿನ್ನ ಮೇಲೆ ಪ್ರಕರಣ ದಾಖಲಿಸುತ್ತೇನೆ. ಒಳಗೆಹೋಗು ಎಂದು ಹೊಡೆದಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ವಿಡಿಯೋ ಸಿಗಬಹುದು, ಪೊಲೀಸರೊಬ್ಬರು ನನ್ನ ಮನೆಗೆ ಬಂದು ಕೇಸ್ ವಾಪಸ್ ತೆಗೆದುಕೊಂಡಿಲ್ಲವೆಂದರೆ ನಿನ್ನ ಕುಟುಂಬ ನಾಶ ಮಾಡುತ್ತೇನೆ ಎಂದು ಹೇಳಿ ಹೊಟ್ಟೆ, ಮುಖಕ್ಕೆ ಹೊಡೆದಿದ್ದಾರೆ ಎಂದು ಬರೆದಿದ್ದಾರೆ.
ನನ್ನ ಗಾಡಿಯ ಮೇಲೆ ಗಾಂಜಾ ಇಡಲು ಪ್ರಯತ್ನಿಸಿದ್ದು, ನಾನು ಪೊಲೀಸರಿಗೆ ತಿಳಿಸಿದ್ದೇನೆ. ಈಗ ನನ್ನ ಜೀವ ಕೊಡುತ್ತಿದ್ದೇನೆ. ನಾನು ಏನು ತಪ್ಪು ಮಾಡಿದ್ದೇನೆ? ನನ್ನ ದೇಶ, ನನ್ನ ಧರ್ಮ ಇಷ್ಟ. ಅದನ್ನು ನಾನು ಪ್ರೀತಿ ಮಾಡುತ್ತೇನೆ. ಅದು ನನ್ನ ತಪ್ಪಾ. ನಾನು ನನ್ನ ಧರ್ಮದ ಬಗ್ಗೆ ಪ್ರೀತಿ ಇದೆ. ನಾನು ಸಾಯುತಾ ಇದ್ದೇನೆ. ಆದ್ರೆ ನಾನು ಹೆದರಿ ಅಲ್ಲ. ನಾನು ಹೇಡಿ ಆಗಿದ್ರೆ ಇಷ್ಟು ಮಾಡುವುದಿಲ್ಲವಾಗಿದ್ದೆ. ನಾನು ನನ್ನ ಮಕ್ಕಳಿಗೋಸ್ಕರ ಈ ಕೆಲಸ ಮಾಡಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಬರೆದಿರುವ ಪತ್ರ ಸಿಕ್ಕಿದೆ.ಶಂಕರ್ ಅಣ್ಣ ಎನ್ನುವವರ ಹೆಸರನ್ನು ಉಲ್ಲೇಖಿಸಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಎಲಿಷಾ ಹಾಗೂ ಇತರರು ಈ ಘಟನೆಗೆ ಕಾರಣ ಎಂದು ತಿಳಿಸಿದ್ದು, ಪತ್ನಿ ರಾಧಾ ಅವರನ್ನು ಉಲ್ಲೇಖಿಸಿ, ನನ್ನನ್ನು ಕ್ಷಮಿಸು, ನಿನ್ನಂತ ಹೆಂಡತಿ ಸಿಗಬೇಕಾದರೆ ನಾನು ಪುಣ್ಯ ಮಾಡಿರಬೇಕು. ನಾನು ಸತ್ರೆ ಯಲ್ಲಾ ಸರಿಆಗುತ್ತೆ. ೧೦೦ ಜನುಮಕು ನೀನು ಬೇಕು. ಈ ಲವ್ ಯೂ ರಾಧಾ ಎಂದು ಬರೆದಿದ್ದಾರೆ.ಚಾರು ಇರಿತ ಪ್ರಕರಣದ ಬಳಿಕ ಪೊಲೀಸರು ಮಧ್ಯರಾತ್ರಿ ನಮ್ಮ ಮನೆಗೆ ಬಂದಿದ್ದು, ಕೇಳಲು ಹೋದರೆ ನೀನು ಹೋಗಿ ಮಲಗು ಎಂದಿದ್ದಾರೆ. ಮೊಬೈಲ್ ಕೂಡಾ ಕಸಿದುಕೊಂಡಿದ್ದಾರೆ. ಪೊಲೀಸ್ ಒಬ್ಬರು ನಮ್ಮ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳುತ್ತಿದ್ದರು. ಸಮಾಧಾನ ಪಡಿಸಿದ್ದೆನು. ಆದರೆ ಈ ರೀತಿ ಮಾಡಿಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ ಎಂದು ಮೃತ ಮಾರುತಿ ಪತ್ನಿ ರಾಧಾ ಹೇಳಿದ್ದಾರೆ.
ಎಲಿಷಾ ಎಲಕಪಾಟಿ ವಿಡಿಯೋ ಮಾಡಿದ್ದೇ ಇದಕ್ಕೆಲ್ಲ ಕಾರಣವಾಗಿದೆ. ದೂರಿನ ಬಳಿಕ ಕ್ಷುಲ್ಲಕ ಕಾರಣಕ್ಕೆ ಎಲಿಷಾ ಅವರ ಪತ್ನಿಯ ತಮ್ಮ ಜಗಳ ತೆಗೆದು ಚಾಕುವಿನಿಂದ ಇರಿದಿದ್ದರು. ಪದೇ ಪದೇ ಮಾರುತಿಗೆ ಕೆಟ್ಟದ್ದಾಗಿ ನಿಂದನೆ ಮಾಡಿ, ಬೆದರಿಕೆ ಕೂಡಾ ಹಾಕಿದ್ದರು. ಮಾರುತಿಯನ್ನು ಸಾಯಿಸಲೇ ಬೇಕು ಎಂದು ತೀರ್ಮಾನಿಸಿದಂತಿತ್ತು ಎಂದು ಮೃತನ ಸಂಬಂಧಿ ಜ್ಯೋತಿ ತಿಳಿಸಿದ್ದಾರೆ.