ತಾಲೂಕಿನಾದ್ಯಂತ ಅಕ್ರಮ ಗೋ ಕಳ್ಳತನ, ಕಸಾಯಿಖಾನೆ, ಗೋವಧೆ ವಿಪರೀತವಾಗಿದ್ದು, ಗೋಕಳ್ಳತನ ತಡೆಯಲು ಹಿಂಬಾಲಿಸಿದ ರೈತರ ವಿರುದ್ದ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಂಬಂದಿಸಿದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಪೊಲೀಸ್ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ್ಯ ವಿಧಿ ಪ್ರಮುಖ್ ಶಿವರಾಜ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನಾದ್ಯಂತ ಅಕ್ರಮ ಗೋ ಕಳ್ಳತನ, ಕಸಾಯಿಖಾನೆ, ಗೋವಧೆ ವಿಪರೀತವಾಗಿದ್ದು, ಗೋಕಳ್ಳತನ ತಡೆಯಲು ಹಿಂಬಾಲಿಸಿದ ರೈತರ ವಿರುದ್ದ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಂಬಂದಿಸಿದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಪೊಲೀಸ್ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ್ಯ ವಿಧಿ ಪ್ರಮುಖ್ ಶಿವರಾಜ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಸುದ್ದಿಮನೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಗೋಕಳ್ಳತನ ಅಕ್ರಮ ಕಸಾಯಿಖಾನೆ, ಗೋವಧೆ ವಿಪರೀತವಾಗಿದ್ದು ಈ ದಿಸೆಯಲ್ಲಿ ತಾಲೂಕಿನ ಕೊಡುಗೆ ಹೆಚ್ಚಾಗಿರುವುದು ವಿಪರ್ಯಾಸ ಎಂದರು.
ಗೋಹತ್ಯೆ ರಾಜ್ಯದಲ್ಲಿ ನಿಷೇಧಿಸಲಾಗಿದ್ದರೂ ಕಾನೂನಿನ ಕನಿಷ್ಠ ಭಯವಿಲ್ಲದೆ, ಗೌರವ ನೀಡದೆ ಗೋಹತ್ಯೆ ಹೆಚ್ಚುತ್ತಿರುವುದು ಬಹು ಸಂಖ್ಯಾತ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗೆ ತೀವ್ರ ರೀತಿಯಲ್ಲಿ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ತಾಲೂಕಿನ ಗೊದ್ದನಕೊಪ್ಪ ಗ್ರಾಮದಲ್ಲಿನ ಕೃಷಿಕ ಶಿವರಾಂ, ಸಚಿನ್ ಕೊಟ್ಟಿಗೆಯಲ್ಲಿದ್ದ ಎಮ್ಮೆ ಹಾಗೂ ಹಸುವನ್ನು ಕಳೆದ 15ರಂದು ರಾತ್ರೋ ರಾತ್ರಿ ಹೊತ್ತೊಯ್ದ ಕಳ್ಳರನ್ನು ಹಿಂಬಾಲಿಸಿದಾಗ ತಾಲೂಕಿನ ಮುಸ್ಲಿಂ ಬಾಹುಳ್ಯದ ಖವಾಸ್ ಪುರ ಗ್ರಾಮದಲ್ಲಿ ಹಲವರು ಏಕಾಏಕಿ ದಾಳಿ ನಡೆಸಿ ಹಲ್ಲೆಗೈದಿದ್ದಾರೆ. ಈ ಬಗ್ಗೆ ನಿಖರ ಮಾಹಿತಿ ನೀಡಿ ಸ್ಥಳೀಯ ಠಾಣೆಗೆ ದೂರು ನೀಡಲಾಗಿದ್ದು ಸ್ವೀಕರಿಸಬೇಕಾದ ಪೊಲೀಸ್ ಸಿಬ್ಬಂದಿ ಖವಾಸ್ ಪುರ ಗ್ರಾಮಕ್ಕೆ ತೆರಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.ಗೋಕಳ್ಳತನದ ಬಗ್ಗೆ ಜಿಲ್ಲಾದ್ಯಂತ 270ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು ಭದ್ರಾವತಿ, ಸಾಗರ, ಶಿವಮೊಗ್ಗ, ಶಿರಾಳಕೊಪ್ಪದಲ್ಲಿ ಅಕ್ರಮ ಕಸಾಯಿಖಾನೆ ವಿಪರೀತವಾಗಿದೆ. ಕಾನೂನಿನ ಭಯವಿಲ್ಲದೆ ವ್ಯವಸ್ಥೆಗೆ ಸವಾಲಾಗಿರುವ ಅಕ್ರಮ ಕಸಾಯಿಖಾನೆಗಳ ಬಗ್ಗೆ ಹಿಂದೂ ಜಾಗರಣ ವೇದಿಕೆ ಹೋರಾಟ ನಿರಂತರವಾಗಿದ್ದು ಗೋಹತ್ಯಾ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ವಿಫಲವಾಗಿದೆ. ಕಾನೂನು ಸ್ಪಷ್ಟ ಉಲ್ಲಂಘಿಸಿ ನಡೆಯುತ್ತಿರುವ ಅಕ್ರಮದ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ದಾಖಲಾದ ದೂರುಗಳ ಹಿನ್ನೆಲೆಯಲ್ಲಿ ಕಸಾಯಿಖಾನೆ ಜಾಗ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿದ ಅವರು, ಗೋವಧೆ, ಕಸಾಯಿಖಾನೆಗಳನ್ನು ನಿರ್ಬಂಧಿಸಿ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತಪ್ಪಿದಲ್ಲಿ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಮುದ್ದನಹಳ್ಳಿ ಗ್ರಾಮದ ರೈತ ತಿಮ್ಮೇಶ್ ಮಾತನಾಡಿ, ಬಕ್ರೀದ್ ಹಿನ್ನಲೆಯಲ್ಲಿ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಿ ಅಕ್ರಮ ಗೋ ಸಾಗಾಟ ತಡೆಗಟ್ಟುವಂತೆ ಸಲ್ಲಿಸಿದ ಮನವಿಗೆ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇದಿಕೆ ಜಿಲ್ಲಾ ಪ್ರಮುಖ್ ರಾಜ್ ಭಜರಂಗಿ ತಾ.ಪ್ರಮುಖ್ ಶರತ್ ಮತ್ತಿತರರು ಉಪಸ್ಥಿತರಿದ್ದರು.