ಪೊಲೀಸ್ ಎಂದರೆ ಭಯ ಅಲ್ಲ, ಭರವಸೆ

| Published : Jun 20 2024, 01:02 AM IST

ಸಾರಾಂಶ

ಮೊಬೈಲ್ ಬೆಲೆ ಕಡಿಮೆ ಇದ್ದರೂ, ಅದರ ಜತೆಗಿನ ಬಾಂಧವ್ಯ, ಅದರೊಳಗಿನ ಸವಿ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾರಾದರೂ ಮೊಬೈಲ್ ಕಳೆದುಕೊಂಡರೆ ತಕ್ಷಣ ಐಎಂಇಐ ಸಂಖ್ಯೆಯ ಸಮೇತ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿ. ಬಳಿಕ ಸೆನ್ ವಿಭಾಗದ ಪೊಲೀಸ್ ಸಿಬ್ಬಂದಿ ಗಮನಕ್ಕೆ ತರಬೇಕು.

ಹುಬ್ಬಳ್ಳಿ:

ಸಾರ್ವಜನಿಕರು ಪೊಲೀಸರು ಎಂದರೆ ಭಯಪಡೆದೆ ಭರವಸೆ ಇಡಬೇಕು. ನಿಮ್ಮ ರಕ್ಷಣೆಗಾಗಿಯೇ ಪೊಲೀಸರು ಇರುವುದು ಎಂಬುದನ್ನು ಅರ್ಥೈಸಿಕೊಳ್ಳಿ ಎಂದು ಮಹಾನಗರ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ ಹೇಳಿದರು.

ಅವರು ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ನಡೆದ ಕಳೆದು ಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದುಕೊಂಡ ಸಾರ್ವಜನಿಕರ ₹49 ಲಕ್ಷ ಮೌಲ್ಯದ 315 ಮೊಬೈಲ್ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದ ಅವರು,

ಮೊಬೈಲ್ ಬೆಲೆ ಕಡಿಮೆ ಇದ್ದರೂ, ಅದರ ಜತೆಗಿನ ಬಾಂಧವ್ಯ, ಅದರೊಳಗಿನ ಸವಿ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾರಾದರೂ ಮೊಬೈಲ್ ಕಳೆದುಕೊಂಡರೆ ತಕ್ಷಣ ಐಎಂಇಐ ಸಂಖ್ಯೆಯ ಸಮೇತ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿ. ಬಳಿಕ ಸೆನ್ ವಿಭಾಗದ ಪೊಲೀಸ್ ಸಿಬ್ಬಂದಿ ಗಮನಕ್ಕೆ ತರಬೇಕು. ಹೀಗೆ ಮಾಡುವುದರಿಂದ ಮೊಬೈಲ್‌ನಲ್ಲಿ ಇರುವ ಬ್ಯಾಂಕ್ ಖಾತೆ, ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗದಂತೆ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.

ಅಪರಾಧ ಚಟುವಟಿಕೆ ತಡೆಯುವಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಪೊಲೀಸರು ನೀಡುವ ಸೂಚನೆ ಪಾಲಿಸಬೇಕು. ಅನುಮಾನಾಸ್ಪದ ಸಂಗತಿಗಳು ನಡೆದಾಗ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಡಿಸಿಪಿ ಕುಶಾಲ್ ಚೌಕ್ಸೆ ಮಾತನಾಡಿ, ಸೈಬರ್ ವಂಚನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ. ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ವಂಚನೆ ಆದಾಗ 1930ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಹನಿ ಟ್ರಾಪ್, ಲಕ್ಕಿ ಡ್ರಾ ಹಾಗೂ ಬ್ಯಾಂಕ್ ಅಕೌಂಟ್‌ನಿಂದ ಹಣ ಕಡಿತವಾದ 1 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚಕರನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ. ದೂರು ದಾಖಲಿಸುವುದು ತಡವಾದಷ್ಟು ವಂಚಕರು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.

ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯಕ ಮಾತನಾಡಿದರು. ಈ ವೇಳೆ ಸಿಎಆರ್ ಡಿಸಿಪಿ ಯಲ್ಲಪ್ಪ ಕಾಶಪ್ಪನವರ, ಎಸಿಪಿ ವಿನೋದ ಮುಕ್ತೇದಾರ್, ಡಾ. ಶಿವರಾಜ ಕಟಕಬಾವಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.ಶೇ. 30ರಷ್ಟು ಫೋನ್‌ಗಳ ರಿಕವರಿ:

ಪ್ರಸಕ್ತ ಸಾಲಿನಲ್ಲಿ 1526 ಮೊಬೈಲ್ ಕಳ್ಳತನದ ಪ್ರಕರಣ ದಾಖಲಾಗಿದ್ದವು. ಈ ಪೈಕಿ 315(ಶೇ. 30) ರಷ್ಟು ಫೋನ್‌ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಪ್ರಕರಣಗಳ ತನಿಖೆ ನಡೆದಿದೆ. ಐಎಂಇಐ ನಂಬರ್ ಇಲ್ಲದ ಫೋನ್‌ ಪತ್ತೆಹಚ್ಚುವುದು ಕಷ್ಟ. ಐಎಂಇಐ ನಂಬರ್ ಇದ್ದರೂ, ಕಳ್ಳರು ಅದನ್ನು ಆನ್ ಮಾಡುವ ವರೆಗೂ ಅದು ಅಲಭ್ಯ. ಹೀಗಾಗಿ ವಾರಸುದಾರರು ಮೊಬೈಲ್‌ನ ಐಎಂಇಐ ನಂಬರ್ ಹಾಗೂ ಫೊನ್ ಬಿಲ್ ಅನ್ನು ಪ್ರತ್ಯೇಕವಾಗಿ ತೆಗೆದಿರುವುದು ಉತ್ತಮ ಎಂದು ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ತಿಳಿಸಿದರು,ಕಷ್ಟಪಟ್ಟು ಹಣ ಸಂಗ್ರಹಿಸಿ ಖರೀದಿಸಿದ ಮೊಬೈಲ್‌ ಕೆಲವೇ ದಿನಗಳಲ್ಲಿ ಕಳೆದು ಹೋಗಿತ್ತು. 6 ತಿಂಗಳ ಹಿಂದೆ ಸಿಇಐಆರ್ ಪೋರ್ಟಲ್‌ನಲ್ಲಿ ಪ್ರಕರಣ ದಾಖಲಿಸಿದ್ದೆ. ಈಗ ನನ್ನ ಮೊಬೈಲ್‌ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಪೊಲೀಸರಿಗೆ ಧನ್ಯವಾದ ಎಂದು ವಿಜಯಲಕ್ಷ್ಮಿ ಹೇಳಿದರು.