ಸಾರಾಂಶ
ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಯೋಜನೆ ಜನಸ್ನೇಹಿ ಯೋಜನೆಯಾಗಿದೆ.
ಹಳಿಯಾಳ: ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಯೋಜನೆ ಜನಸ್ನೇಹಿ ಯೋಜನೆಯಾಗಿದೆ. ಪೋಲಿಸರು ಮನೆಗೆ ಬಂದಾಗ ಜನರು ತಮ್ಮ ಕಷ್ಟ ಸುಖ ಹೇಳಬೇಕು. ತೊಂದರೆ ಆಗುತ್ತಾ ಇದ್ದರೆ ಹೇಳಬಹುದು. ಅನುಮಾನಸ್ಪದ ವ್ಯಕ್ತಿಗಳ ಚಟುವಟಿಕೆಗಳು ಕಂಡು ಬಂದರೆ ಮಾಹಿತಿ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿರಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಶನಿವಾರ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಹಸಿರು ಧ್ವಜ ತೋರಿಸುವ ಮೂಲಕ ಮನೆ ಮನೆಗೆ ಪೊಲೀಸರು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಜನಸಾಮಾನ್ಯರಲ್ಲಿ ಪೊಲೀಸರೆಂದರೆ ಭಯ ಅಪಾರ. ಸಮಸ್ಯೆಯಿದ್ದರೂ ಕೆಲವರು ಠಾಣೆಯ ಕಟ್ಟೆ ಹತ್ತಲು ಹಿಂಜರಿಯುತ್ತಾರೆ. ಹೀಗಿರುವಾಗ ಜನರ ಮನಸ್ಸಿನಲ್ಲಿರುವ ಭಯವನ್ನು ದೂರ ಮಾಡಲು ಈ ಯೋಜನೆಯು ಅತ್ಯಂತ ಸೂಕ್ತವಾಗಿದೆ. ದೇಶದಲ್ಲಿಯೇ ಆರಂಭಗೊಳ್ಳುತ್ತಿರುವ ಜನಸ್ನೇಹಿ ಮೊದಲ ಯೋಜನೆ ಇದಾಗಿದೆ ಎಂದರು.
ಪೊಲೀಸರೇ ಜನರ ಮನೆಗೆ ಭೇಟಿ ನೀಡಿ ಅವರ ಕಷ್ಟ ಆಲಿಸಿ ಪರಿಹರಿಸುವ ಯೋಜನೆ, ಬೀಟ್ ಪೋಲಿಸರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಬಾಡಿಗೆ ಮನೆಯಲ್ಲಿ ಯಾರಿದ್ದಾರೆ, ಎಲ್ಲಿಯವರು, ಯಾವ ವೃತ್ತಿ, ಯಾವೆಲ್ಲ ಚಟುವಟಿಕೆಗಳು ನಡೆಯುತ್ತವೆ ಹೀಗೆ ಹಲವಾರು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುವುದರಿಂದ ಪೊಲೀಸ್ ಇಲಾಖೆಯಲ್ಲಿ ಇಡೀ ಪಟ್ಟಣದ ಮಾಹಿತಿಯು ಸಂಗ್ರಹವಾಗಲಿದೆ. ಇದರಿಂದ ಅವರಿಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವುದು ಎಂದರು.ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಜಯಪಾಲ ಪಾಟೀಲ, ಪಿಎಸೈ ಬಸವರಾಜ ಮಬನೂರ, ಪಿಎಸೈ ಮಹೇಶ ಮೆಳಗಿರಿ, ಪೊಲೀಸ್ ಸಿಬ್ಬಂದಿ ಮತ್ತು ಆಟೋ ಚಾಲಕರು, ವಾಹನ ಚಾಲಕರು, ಶಾಲಾ-ಕಾಲೇಜು ಮಕ್ಕಳ ಸಾರ್ವಜನಿಕರು ಇದ್ದರು.