ಪೊಲೀಸರು- ವಕೀಲರ ನಡುವೆ ಜಂಗಿ ಕುಸ್ತಿ

| Published : Dec 04 2023, 01:30 AM IST

ಸಾರಾಂಶ

ಪೊಲೀಸರು- ವಕೀಲರ ನಡುವೆ ಜಂಗಿ ಕುಸ್ತಿ: ಒಂದೇ ರಾತ್ರಿ 4 ಎಫ್‌ಐಆರ್ ದಾಖಲು

ವಕೀಲರ ವಿರುದ್ಧ ಒಂದೇ ರಾತ್ರಿ 4 ಎಫ್‌ಐಆರ್ ದಾಖಲು । ಬೆಳಗಿನ ಜಾವ ರಸ್ತೆ ತಡೆ ಕೈಬಿಟ್ಟ ಪ್ರತಿಭಟನಾ ನಿರತ ಪೊಲೀಸರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಟೌನ್ ಪೊಲೀಸ್ ಠಾಣೆಯಲ್ಲಿ ನ. 30ರ ರಾತ್ರಿ ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣ ದಿನೇ ದಿನೇ ಬಿಗಡಾಯಿಸುತ್ತಿದೆ. ಪೊಲೀಸ್ ಠಾಣೆಯ ನಾಲ್ಕು ಗೋಡೆಗಳ ನಡುವೆ ನಡೆದ ಘಟನೆ ಬೀದಿಗೆ ಬಂದಿದೆ. ಪೊಲೀಸರು ಹಾಗೂ ವಕೀಲರ ನಡುವೆ ಜಂಗಿ ಕುಸ್ತಿ ಆರಂಭಗೊಂಡಿದೆ. ವಕೀಲರ ಮೇಲಿನ ಆಕ್ರೋಶ ಸ್ಪೋಟಗೊಂಡಿದ್ದು, ಒಂದೇ ದಿನ ಮಧ್ಯ ರಾತ್ರಿ 2 ಗಂಟೆ ಅವಧಿಯೊಳಗೆ ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಸುಧಾಕರ್ ಸೇರಿದಂತೆ ಹಲವು ಮಂದಿ ವಕೀಲರ ವಿರುದ್ಧ ಟೌನ್ ಪೊಲೀಸ್ ಠಾಣೆಯಲ್ಲಿ 4 ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ದೂರುಗಳನ್ನು ನೀಡಿದ್ದು ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳೇ. ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ದೂರುಗಳಾಗಿವೆ. ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಒಂದನೇ ಆರೋಪಿ ಗುರುಪ್ರಸಾದ್ ಅವರು ಪ್ರೀತಂ ವಿರುದ್ಧ ಪ್ರತಿ ದೂರನ್ನು ನೀಡಿದ್ದು, ಇದು, ಕೂಡ ಎಫ್ಐಆರ್ ಆಗಿದೆ.

ರಾಷ್ಟ್ರೀಯ ಹೆದ್ದಾರಿ ತಡೆ: ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿ ಟೌನ್ ಪೊಲೀಸ್ ಠಾಣೆ ಎದುರು ಶನಿವಾರ ರಾತ್ರಿ 8 ಗಂಟೆ ವೇಳೆಗೆ ಧರಣಿ ನಡೆಸಿದ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಎಷ್ಟೇ ಮನವೊಲಿಸಿದರು ಸಿಬ್ಬಂದಿ ಕೇಳಲಿಲ್ಲ. ರಾತ್ರಿ 9.35ರ ವೇಳೆಗೆ ಪ್ರತಿಭಟನಾ ನಿರತ ಪೊಲೀಸರು ಹಾಗೂ ಅವರಿಗೆ ಸಾಥ್ ಕೊಟ್ಟ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ಬಂದು ಸಮಧಾನ ಪಡಿಸಿದರೂ ಕೇಳಲಿಲ್ಲ. ಬೆಳಗಿನ ಜಾವದವರೆಗೆ ರಸ್ತೆ ತಡೆ ಮುಂದುವರೆದಿತ್ತು. ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಪ್ರತಿಭಟನೆ ಕೈಬಿಟ್ಟರು.

ಅತ್ತ ಪ್ರತಿಭಟನೆ- ಇತ್ತ ಎಫ್‌ಐಆರ್

ಹನುಮಂತಪ್ಪ ವೃತ್ತದಲ್ಲಿ ಪೊಲೀಸರು ರಸ್ತೆ ತಡೆ ಮುಂದುವರಿಸಿದ್ದರೆ, ಇತ್ತ ಅದೇ ಸಮಯಕ್ಕೆ ಟೌನ್ ಪೊಲೀಸ್ ಠಾಣೆಯಲ್ಲಿ ವಕೀಲರ ವಿರುದ್ಧ ಪೊಲೀಸರಿಂದ ದೂರು ಹಾಗೂ ಎಫ್‌ಐಆರ್ ದಾಖಲು ಪ್ರಕ್ರಿಯೆ ಆರಂಭಗೊಂಡಿತು. ಗುರುಪ್ರಸಾದ್ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ಕಾರಣ ನೀಡಿ ವಕೀಲ ಪ್ರೀತಂ ವಿರುದ್ಧ ನೀಡಿರುವ ದೂರಿನನ್ವಯ ಪ್ರೀತಂ ವಿರುದ್ಧ ಶನಿವಾರ ಮಧ್ಯ ರಾತ್ರಿ 12.30ಕ್ಕೆ ಎಫ್‌ಐಆರ್ ದಾಖಲಾಗಿದೆ. ನ.30 ರಂದು ಜಿಲ್ಲಾ ರಕ್ಷಣಾಧಿಕಾರಿ ಠಾಣೆಯಲ್ಲಿದ್ದ ಸಂದರ್ಭದಲ್ಲಿ ವಕೀಲರಾದ ಭುವನೇಶ್, ನಂದೀಶ್, ಸುಧಾಕರ್, ಸುಜೇಂದ್ರ ಹಾಗೂ ಇತರೆ 10 ಮಂದಿ ಠಾಣೆಯೊಳಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಮುಖ್ಯಪೇದೆ ಎ.ಎಂ. ಸತೀಶ್ ನೀಡಿರುವ ದೂರಿನನ್ವಯ ರಾತ್ರಿ 01.03ಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ಇದೇ ಠಾಣೆ ಮುಖ್ಯಪೇದೆ ರವಿ ಅವರು ಸುಧಾಕರ್ ಹಾಗೂ ಮಹೇಶ್‌ಕುಮಾರ್ ವಿರುದ್ಧ ಎಫ್‌ಐಆರ್ ಹರಿದು ಹಾಕಿರುವ ಕಾರಣ ನೀಡಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ 1.45ಕ್ಕೆ ಎಫ್ಐಆರ್ ದಾಖಲಾಗಿದೆ. ಅದೇ ದಿನ ಟೌನ್ ಪೊಲೀಸ್ ಠಾಣೆಯಿಂದ ಜಿಲ್ಲಾಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ತಮ್ಮ ಜೀಪ್‌ನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ವಕೀಲರಾದ ಸುಧಾಕರ್, ಸುನೀಲ್, ಸತೀಶ್, ಹಳೇಕೋಟೆ ತೇಜಸ್ವಿ ಹಾಗೂ ಇತರರ ವಿರುದ್ಧ ಪೊಲೀಸ್ ವಾಹನ ಚಾಲಕ ಕೇಶವಮೂರ್ತಿ ನೀಡಿದ ದೂರಿನನ್ವಯ 2.30ಕ್ಕೆ ಎಫ್‌ಐಆರ್ ದಾಖಲಾಗಿದೆ. ಅಂದರೆ, ರಾತ್ರೋ ರಾತ್ರಿ 2 ಗಂಟೆ ಅವಧಿಯೊಳಗೆ 4 ದೂರುಗಳು ದಾಖಲು ಮಾಡಿಕೊಳ್ಳಲಾಗಿದೆ.

--- ಬಾಕ್ಸ್ ----

ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ

ಚಿಕ್ಕಮಗಳೂರು: ಪೊಲೀಸರು ಹಾಗೂ ವಕೀಲರ ಸಂಘರ್ಷ ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ ಎಂದು ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ ಹೇಳಿದ್ದಾರೆ. ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿರುವ ಮಾಹಿತಿ ನೀಡಿದರು. ಶನಿವಾರ ರಾತ್ರಿ ಪೊಲೀಸರು ಹಾಗೂ ಕುಟುಂಬಸ್ಥರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರ ಠಾಣೆಗೆ ಐಜಿಪಿ ಡಾ. ಚಂದ್ರಗುಪ್ತ ಭೇಟಿ ನೀಡಿದ್ದರು. ಪ್ರತಿಭಟನೆಗೆ ಕಾರಣವಾದ ಲೋಪದೋಷಗಳ, ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದರು.

3 ಕೆಸಿಕೆಎಂ 3ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಶನಿವಾರ ಮಧ್ಯ ರಾತ್ರಿ ಧರಣಿ ನಿರತ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರನ್ನು ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ಮನವೊಲಿಸುತ್ತಿರುವುದು.