ಅಧಿವೇಶನದಲ್ಲಿ ಧಾರವಾಡಕ್ಕೆ ಸಿಗುವುದೇ ಪ್ರತ್ಯೇಕ ಪಾಲಿಕೆ?

| Published : Dec 04 2023, 01:30 AM IST

ಸಾರಾಂಶ

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಅದರಲ್ಲೂ ಕಳೆದೆರಡು ವರ್ಷಗಳಿಂದ ಈ ಹೋರಾಟದ ತಿರುವು ಬದಲಾಗಿ ಮತ್ತಷ್ಟು ಬಲ ಬಂದಿದೆ. ಇದೀಗ ಡಿ. 4ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲ ಅಧಿವೇಶನದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಭಾಗ್ಯ ಸಿಗುವುದೇ ಎಂದು ಧಾರವಾಡ ಜನತೆ ಕಾತುರರಾಗಿದ್ದಾರೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಅದರಲ್ಲೂ ಕಳೆದೆರಡು ವರ್ಷಗಳಿಂದ ಈ ಹೋರಾಟದ ತಿರುವು ಬದಲಾಗಿ ಮತ್ತಷ್ಟು ಬಲ ಬಂದಿದೆ. ಇದೀಗ ಡಿ. 4ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲ ಅಧಿವೇಶನದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಭಾಗ್ಯ ಸಿಗುವುದೇ ಎಂದು ಧಾರವಾಡ ಜನತೆ ಕಾತುರರಾಗಿದ್ದಾರೆ.

ಜನಸಂಖ್ಯೆ, ತೆರಿಗೆ ಸಂಗ್ರಹ, ವ್ಯಾಪ್ತಿ ಪ್ರದೇಶ ಸೇರಿದಂತೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಧಾರವಾಡ ನಗರ ಎಲ್ಲ ರೀತಿಯ ಅರ್ಹತೆ ಹೊಂದಿದೆ. ಈ ಬಗ್ಗೆ ಆರಂಭದಲ್ಲಿ ಸಾಕಷ್ಟು ಚರ್ಚೆಗಳೂ ನಡೆದು, ಇದೀಗ ರಾಜಕೀಯ ಇಚ್ಛಾಶಕ್ತಿ ಮಾತ್ರ ಪ್ರತ್ಯೇಕ ಪಾಲಿಕೆಗೆ ಅಡ್ಡಿಯಾಗಿ ಉಳಿದಿದೆ. ಈಗಾಗಲೇ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ವತಿಯಿಂದ ಎಲ್ಲ ರೀತಿಯ ಹೋರಾಟಗಳು ನಡೆದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸಹ ಬೆಂಬಲ ಸೂಚಿಸಿದ್ದಾರೆ. ಹುಬ್ಬಳ್ಳಿಯವರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರತ್ಯೇಕ ಮಹಾನಗರ ಪಾಲಿಕೆಗೆ ತಮ್ಮದು ಯಾವುದೇ ವಿರೋಧವಿಲ್ಲ ಎಂದು ಬಹಿರಂಗ ಹೇಳಿಕೆ ಸಹ ನೀಡಿದ್ದಾರೆ. ಎಲ್ಲ ಶಾಸಕರು ಒಪ್ಪುವುದಾದರೆ ನಮ್ಮದೂ ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವರು ನುಡಿದಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಕಾನೂನು ಸಚಿವರಾದ ಎಚ್‌.ಕೆ. ಪಾಟೀಲ ಸಹ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.

ಕಳೆದ ಚಳಿಗಾಲದ ಅಧಿವೇಶನದಲ್ಲಿ ಹೋರಾಟ ಸಮಿತಿಯಿಂದ ನಡೆದ ಹೋರಾಟ ಸ್ಥಳಕ್ಕೆ ಮುಖ್ಯಮಂತ್ರಿಗಳ ಬದಲು ಎಸ್‌.ಟಿ. ಸೋಮಶೇಖರ ಆಗಮಿಸಿ ಮನವಿ ಪಡೆದಿದ್ದರು. ಆದರೆ, ಅಧಿವೇಶನದಲ್ಲಿ ಯಾವುದೇ ಚರ್ಚೆಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಈ ಬಾರಿಯ ಅಧಿವೇಶನ ಸಮಯದಲ್ಲೂ ಹೋರಾಟ ವೇದಿಕೆ ಹೋರಾಟಕ್ಕೆ ಸಿದ್ಧತೆ ಕೈಗೊಂಡಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಮನೋಜ ಪಾಟೀಲ ಹೇಳುತ್ತಾರೆ.

ಬೆಲ್ಲದ ಹೇಳಿಕೆ ಏನಾಯ್ತು?

ಈಗಿರುವ ಹು-ಧಾ ಮಹಾನಗರ ಪಾಲಿಕೆಯ ಆಡಳಿತ ಹುಬ್ಬಳ್ಳಿ ಕೇಂದ್ರಿತವಾಗಿದ್ದು ಧಾರವಾಡ ನಗರ ಜಿಲ್ಲಾ ಕೇಂದ್ರವಾಗಿದ್ದರೂ ಅಭಿವೃದ್ಧಿ ವಿಷಯಗಳಲ್ಲಿ ತೀರಾ ಹಿಂದಿದೆ. ಶಾಸಕ ಅರವಿಂದ ಬೆಲ್ಲದ ಅವರು ಆರು ತಿಂಗಳಲ್ಲಿ ಪ್ರತ್ಯೇಕ ಪಾಲಿಕೆ ಮಾಡುವುದಾಗಿ ಹೇಳಿದ ಹೇಳಿಕೆ ಏನಾಯ್ತು ಎನ್ನುವುದು ಹೋರಾಟಗಾರರ ಬೇಸರದ ಮಾತು.

ಈಗಾಗಲೇ ಧಾರವಾಡ ಪ್ರತ್ಯೇಕ ಪಾಲಿಕೆಯಾಗಿದ್ದರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಳಗೊಂಡು ₹1000 ಕೋಟಿ ಅನುದಾನ ಲಭ್ಯವಾಗುತ್ತಿತ್ತು. ವಿವಿಧ ಯೋಜನೆಗಳಲ್ಲಿ ಪ್ರತ್ಯೇಕ ಅನುದಾನ ಸಿಗುತ್ತಿತ್ತು. ಧಾರವಾಡ ನಗರದ ಅಸ್ಮಿತೆ ಮತ್ತು ಸ್ವಾಭಿಮಾನದ ದೃಷ್ಟಿಯಿಂದ ಹಾಗೂ ಈ ನಗರದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಇಲ್ಲಿಯ ರಾಜಕಾರಣಿಗಳು ಈ ಬಾರಿಯಾದರೂ ಚಳಿಗಾಲದ ಅಧಿವೇಶನದಲ್ಲಿ ವಿಷಯವನ್ನು ಮುನ್ನಲೆಗೆ ತಂದು ಒಪ್ಪಿಗೆ ಪಡೆಯಬೇಕು. ಅದಕ್ಕಾಗಿ ಡಿ. 7ರಂದು ಸುವರ್ಣ ಸೌಧದದ ಎದುರು ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಹೋರಾಟಗಾರ ರವಿ ಮಾಳಿಗೇರ ಮಾಹಿತಿ ನೀಡಿದರು.

ಸಮಸ್ಯೆಗಳಿಗೆ ಸಿಗಲಿ ಮುಕ್ತಿ?:

ಧಾರವಾಡ ಪ್ರತ್ಯೇಕ ಪಾಲಿಕೆ ಭಾಗ್ಯವಲ್ಲದೇ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ. ಬಿಜೆಪಿ ಸರ್ಕಾರವಿದ್ದಾಗ ತುಪರಿ ಹಳ್ಳ ಏತನೀರಾವರಿ ಯೋಜನೆಗೆ ಚಾಲನೆ ಸಿಕ್ಕಿತ್ತು. ಆದರೆ, ಅನುದಾನದ ಕೊರತೆಯಿಂದ ಚಾಲನೆ ದೊರೆತಿಲ್ಲ. ಈ ಯೋಜನೆ ಸಫಲವಾದರೆ ಧಾರವಾಡ ತಾಲೂಕಿನ ಹತ್ತಾರು ಗ್ರಾಮಗಳ ರೈತರಿಗೆ ನೀರಿನ ಕೊರತೆ ನೀಗುತ್ತದೆ.

ಧಾರವಾಡ ಸುತ್ತಲೂ ರಿಂಗ್‌ ರಸ್ತೆ ನಿರ್ಮಾಣ ಮಾಡುವ ಬೇಡಿಕೆಯೂ ಹಲವು ವರ್ಷಗಳಿಂದ ಇದೆ. ಈಗಾಗಲೇ ಬೈಪಾಸ್‌ ರಸ್ತೆ ವಿಸ್ತರಣೆ ಮಾಡುತ್ತಿರುವುದೇ ಸಮಾಧಾನದ ಸಂಗತಿ. ಜತೆಗೆ ರಿಂಗ್‌ ರಸ್ತೆಯಾದರೆ ಧಾರವಾಡ ನಗರ ಕೈ ಬಿಟ್ಟು ನೇರವಾಗಿ ಸವದತ್ತಿ ಕಡೆಗೆ, ಪಣಜಿ ಕಡೆಗೆ, ನವಲಗುಂದ ಕಡೆಗೆ ಹೋಗಲು ತುಂಬ ಅನುಕೂಲ ಆಗಲಿದೆ.

ಚಿಗರಿ ಬಸ್ಸುಗಳು

ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಪರ್ಕ ಸೇತುವೆಯಾಗಿ ಬಿಆರ್‌ಟಿಎಸ್‌ ಯೋಜನೆ ಅಡಿ ಚಿಗರಿ ಬಸ್ಸುಗಳು ಸಂಚರಿಸುತ್ತಿದ್ದು, ಇತ್ತೀಚೆಗೆ ಆ ಬಸ್ಸುಗಳು ರಿಪೇರಿಗೆ ಬರುತ್ತಿವೆ. ಎಸಿ ಬಂದ್‌ ಆಗಿರುವುದು, ಮಧ್ಯದಲ್ಲಿಯೇ ನಿಲ್ಲುವುದು ಸೇರಿದಂತೆ ಯೋಜನೆ ಹಳ್ಳ ಹಿಡಿಯುತ್ತಿದೆ. ಹೊಸ ಬಸ್ಸುಗಳನ್ನು ನೀಡುವರೇ ಅಥವಾ ಅವಳಿ ನಗರದ ಮಧ್ಯೆ ಹೊಸ ರೀತಿಯ ಸಾರಿಗೆ ವ್ಯವಸ್ಥೆ ಮಾಡುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯುವುದೇ ಕಾದು ನೋಡಬೇಕಿದೆ.