ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯಾದ್ಯಂತ ಮಂಗಳವಾರ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗಿದ್ದು, ಚಾಮರಾಜನಗರದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯದಲ್ಲೇ ಅತಿ ಎತ್ತರದ (27 ಅಡಿ) ಸ್ಮಾರಕಕ್ಕೆ ಗಣ್ಯರು ಗೌರವ ವಂದನೆ ಸಲ್ಲಿಸಿದರು.ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಡಿಕೇರಿಯ ಪೊಲೀಸ್ ಕವಾಯಿತು ಮೈದಾನದಲ್ಲಿ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪೊಲೀಸ್ ಅಧಿಕಾರಿಗಳು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛವಿಟ್ಟು ಗೌರವ ವಂದನೆ ಸಲ್ಲಿಸಿದರು. ಕೊಡಗು ಎಸ್‌ಪಿ ಕೆ.ರಾಮರಾಜನ್, ಸಿಇಓ ಆನಂದ ಪ್ರಕಾಶ್ ಇದ್ದರು.
ಚಾಮರಾಜನಗರದ ಡಿಎಆರ್ ಮೈದಾನದಲ್ಲಿ ನೂತನವಾಗಿ ನಿರ್ಮಿಸಿದ 27 ಅಡಿ ಎತ್ತರದ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಪ್ರಭಾವತಿ ಅವರು ಗೌರವ ವಂದನೆ ಸಲ್ಲಿಸಿದರು. ರಾಜ್ಯದಲ್ಲೇ ಅತಿ ಎತ್ತರದ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಸಹಕರಿಸಿದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಕಂಪನಿಯ ಆಡಳಿತ ವರ್ಗಕ್ಕೆ ಕೃತಜ್ಞತೆ ಸಲ್ಲಿಸಲಾಯಿತು. ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಲಾಯಿತು.ಬಳಿಕ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವದಲ್ಲಿ ಮಾತನಾಡಿದ ಜಿ. ಪ್ರಭಾವತಿ ಅವರು, ನಾಡಿನ ಸುವ್ಯಸ್ಥೆ ಜತೆಗೆ ಸಾರ್ವಜನಿಕರ ಆಸ್ತಿ ರಕ್ಷಿಸಿ, ಜನರ ನೆಮ್ಮದಿಗಾಗಿ ದುಡಿದು ಮಡಿದ ಪೊಲೀಸರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಕರ್ತವ್ಯದಲ್ಲಿರುವಾಗ ಖಾಸಗಿ ಬದುಕಿನ ಕಡೆಗೆ ಹೆಚ್ಚು ಗಮನಹರಿಸದೇ ಸಮಾಜದ ಶಾಂತಿಗೆ ಹೆಚ್ಚು ಗಮನ ನೀಡುವ ಅವರ ಕರ್ತವ್ಯ ಅಭಿನಂದನಾರ್ಹ ಎಂದು ಹೇಳಿದರು.
ಕಾಡುಗಳ್ಳ, ನರಹಂತಕ ವೀರಪ್ಪನ್‌ನಿಂದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಸೇರಿದಂತೆ ಹಲವು ಪೊಲೀಸರು ಹತರಾದರು. ಹುತಾತ್ಮ ಪೊಲೀಸರ ತ್ಯಾಗ, ಬಲಿದಾನ ಮಕ್ಕಳಿಗೆ ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಶಾಲೆಗಳಲ್ಲಿ ಶಿಕ್ಷಕರು ಅವರಿಗೆ ತಿಳಿಸಿಕೊಡಬೇಕು ಎಂದು ಕರೆ ನೀಡಿದರು.ಹುತಾತ್ಮರ ದಿನ ಹಿನ್ನೆಲೆ:
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, 1959ರ ಅ.21ರಂದು ಭಾರತದ ಗಡಿ ಪ್ರದೇಶದಲ್ಲಿ ಸಿಆರ್‌ಪಿಎಫ್ ಪಡೆಯ ಎಸ್‌ಐ, ಕಿರಣ್ ಸಿಂಗ್ ಮತ್ತು ಸಿಬ್ಬಂದಿ ಗಡಿ ಪಹರೆ ಕರ್ತವ್ಯದಲ್ಲಿರುವಾಗ ಚೀನಾ ಹೊಂಚು ಹಾಕಿ ದಾಳಿ ನಡೆಸಿತ್ತು. ಆಗ ಪೊಲೀಸರು ಎದೆಗುಂದದೆ ಜೀವದ ಹಂಗು ತೊರೆದು ರಕ್ತದ ಕೊನೆಯ ಹನಿ ಇರುವವರೆಗೂ ಕೇವಲ ರೈಫಲ್ಸ್‌ಗಳಿಂದ ಹೋರಾಟ ನಡೆಸಿದರು. ಆ ವೇಳೆ 10 ಪೊಲೀಸರು ಮರಣ ಹೊಂದಿ 19 ಮಂದಿ ಗಾಯಗೊಂಡು ಸೆರೆಯಾದರು. ಅವರ ಧೀರತನದ ಕಾರ್ಯದ ನೆನಪಿಗಾಗಿ ಪ್ರತಿವರ್ಷ ದೇಶವ್ಯಾಪಿ ಅ.21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸರಾಗುತ್ತಿದೆ ಎಂದು ತಿಳಿಸಿದರು.ಉಳಿದಂತೆ ಬೆಳಗಾವಿ, ಗದಗ, ಧಾರವಾಡ, ದಾವಣಗೆರೆ, ಯಾದಗಿರಿ, ಕಲಬುರಗಿ, ಮೈಸೂರು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಗಣ್ಯರು ಪೊಲೀಸ್ ಹುತಾತ್ಮರನ್ನು ನೆನೆದು ಗೌರವ ಸಮರ್ಪಿಸಿದರು.
;Resize=(128,128))
;Resize=(128,128))