ಫ್ಲೆಕ್ಸ್ ತೆರವಿಗೆ ಮುಂದಾದ ಪೊಲೀಸರು: ದಾವಣಗೆರೆಯಲ್ಲಿ ಬಿಗುವಿನ ಸ್ಥಿತಿ

| Published : Aug 29 2025, 01:00 AM IST

ಫ್ಲೆಕ್ಸ್ ತೆರವಿಗೆ ಮುಂದಾದ ಪೊಲೀಸರು: ದಾವಣಗೆರೆಯಲ್ಲಿ ಬಿಗುವಿನ ಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಗಣೇಶೋತ್ಸವ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ತೆರವಿಗೆ ಪೊಲೀಸರು ಮುಂದಾದ ಹಿನ್ನೆಲೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾದ ಘಟನೆ ನಗರದ ಮಟ್ಟಿಕಲ್ಲು ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ.

- ಫ್ಲೆಕ್ಸ್ ತೆರವಿಗೆ ಹಿಂದೂಗಳ ತೀವ್ರ ವಿರೋಧ । ಮಟ್ಟಿಕಲ್ಲು ಪ್ರದೇಶದಲ್ಲಿ ರಾತ್ರಿ ಘಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಶ್ರೀ ಗಣೇಶೋತ್ಸವ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ತೆರವಿಗೆ ಪೊಲೀಸರು ಮುಂದಾದ ಹಿನ್ನೆಲೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾದ ಘಟನೆ ನಗರದ ಮಟ್ಟಿಕಲ್ಲು ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ.

ಮಟ್ಟಿಕಲ್ಲು ಪ್ರದೇಶದಲ್ಲಿ ವೀರ ಸಾವರ್ಕರ್ ಯುವಕರ ಸಂಘ ಶ್ರೀ ಗಣೇಶೋತ್ಸವ ಹಮ್ಮಿಕೊಂಡಿದ್ದು, ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಬದಿ ಅಳವಡಿಸಿದ್ದ ಒಂದು ಫ್ಲೆಕ್ಸ್ ಪ್ರಚೋದನಾಕಾರಿಯಾಗಿದೆ ಎಂಬುದಾಗಿ ಫ್ಲೆಕ್ಸ್ ಫೋಟೋ ತೆಗೆದು ಪೊಲೀಸ್ ಇಲಾಖೆಗೆ ಯಾರೋ ಕಳಿಸಿದ್ದರು.

ಫ್ಲೆಕ್ಸ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ವ್ಯಾಘ್ರನಖದಿಂದ ಹತ್ಯೆಗೈಯ್ಯುವ ಫ್ಲೆಕ್ಸ್ ಪ್ರಚೋದನಾಕಾರಿಯಾಗಿದೆ ಎಂಬುದಾಗಿ ಯಾರೋ ಇಲಾಖೆ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಪೊಲೀಸರು ತೆರವಿಗೆ ಬಂದಿದ್ದರು.

ವೀರ ಸಾವರ್ಕರ್ ಯುವಕರ ಸಂಘ ಹಾಗೂ ಸ್ಥಳೀಯರು ಫ್ಲೆಕ್ಸ್ ತೆರವಿಗೆ ಒಪ್ಪಲಿಲ್ಲ. ವಿಷಯ ತಿಳಿದ ಸಂಘ ಪರಿವಾರ, ಹಿಂದೂ ಪರ ಸಂಘಟನೆಗಳ ಮುಖಂಡರು, ಅಪಾರ ಸಂಖ್ಯೆಯಲ್ಲಿ ವಿವಿಧೆಡೆಯಿಂದ ಯುವಜನರು ಸ್ಥಳಕ್ಕೆ ದೌಡಾಯಿಸಿದರು.

ಹಬ್ಬಕ್ಕೆಂದು ಫ್ಲೆಕ್ಸ್ ಅಳವಡಿಸಿದ್ದೇವೆ. ಯಾವುದೇ ಕಾರಣಕ್ಕೂ ಅದನ್ನು ತೆರವು ಮಾಡುವುದಿಲ್ಲ. ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ‌ ಮಹಾರಾಜರು ಶತೃಸಂಹಾರ ಮಾಡುವ ಫ್ಲೆಕ್ಸ್ ಅಳವಡಿಸಿದ್ದನ್ನು ತೆರವು ಮಾಡಿಸಲು ಬಂದಿದ್ದೀರಾ ಎಂಬುದಾಗಿ ಸಂಘದ ಮುಖಂಡರು ಧ್ವನಿ ಎತ್ತಿದರು.

ಮತ್ತೊಂದು ಕಡೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯುವಜನರಿಂದ ಹರಹರ ಮಹಾದೇವ, ಶಿವಾಜಿ ಮಹಾರಾಜ್ ಕೀ ಜೈ, ಜಯ ಗಣೇಶ ಘೋಷಣೆ ಮೊಳಗಿದವು. ಸುಮಾರು ಗಂಟೆಗಳ ಕಾಲ ಪೊಲೀಸ್ ಅಧಿಕಾರಿಗಳು ಮನವೊಲಿಸಿದರೂ ಹಿಂದೂ ಸಂಘಟನೆ ಮುಖಂಡರು ಫ್ಲೆಕ್ಸ್ ತೆರವಿಗೆ ಒಪ್ಪಲಿಲ್ಲ.

ನಾಳೆ ಬೆಳಗ್ಗೆ 9 ಗಂಟೆವರೆಗೆ ಕಾದು, ಹೋರಾಟದ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಸಂಘಟನೆ ಮುಖಂಡರು ಹೇಳಿದ್ದಾರೆ.- - -

(-ಫೋಟೋಗಳಿವೆ.)

-ಡಿವಿಜಿ01 ರಿಂದ 06.